ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

ಬೆಳಗಾವಿ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಈ ಕುರಿತು ಸಾರಿಗೆ ನೌಕರರು ಅಳಲು ತೋಡಿಕೊಂಡಿದ್ದು ನಾನು ಒಪ್ಪಿಕೊಳ್ಳುತ್ತೇನೆ. ದುರ್ದೈವದಿಂದ ಸಂಬಳ ನೀಡಲು ಆಗಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಹೇಳಿದ್ದಾರೆ.

ಎಂಟು ತಿಂಗಳಿಂದ ಕೊರೊನಾ ಬಂದಿದ್ದು, ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಬಸ್‍ನಲ್ಲಿ ಸಾರ್ವಜನಿಕರು ಪ್ರಯಾಣಿಸುತ್ತಿಲ್ಲ, ಹೀಗಾಗಿ ಬರುತ್ತಿರುವ ಆದಾಯದಲ್ಲಿ ಬರಿ ಡೀಸೆಲ್‍ಗೆ ಸಾಕಾಗುತ್ತಿದೆ. ಈ ಕಾರಣಕ್ಕೆ ಸರ್ಕಾರಕ್ಕೆ ಸಂಬಳ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದೇವು. ಪ್ರತಿ ತಿಂಗಳು 325 ಕೋಟಿ ರೂ. ಸಂಬಳಕ್ಕೆ ಹಣ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ಕೊಡಬೇಕು ಅಂತಾ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟು ಸಂಬಳ ನೀಡಲು ಮನವಿ ಮಾಡುತ್ತೇನೆ. ಮೂರು ತಿಂಗಳಿಂದ ಸಂಬಳಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೇವು. ಎರಡು ಬಾರಿ ಪ್ರಸ್ತಾವನೆ ವಾಪಾಸ್ ಬಂದಿದೆ. ಮತ್ತೆ ಈಗ ಪ್ರಸ್ತಾವನೆ ಕಳುಹಿಸಿದ್ದೇವೆ. ಶೇಕಡಾ 70 ರಷ್ಟಾದ್ರೂ ಸರ್ಕಾರ ಹಣ ಕೊಟ್ಟರೆ ಉಳಿದ ಹಣವನ್ನು ಸಾಲ ಪಡೆದುಕೊಂಡಾದರೂ ಸಂಬಳ ನೀಡುತ್ತೇವೆ. ಸರ್ಕಾರದಲ್ಲಿ ಆದಾಯದ ಕೊರತೆ ಇರುವುದಕ್ಕೆ ಮುಂದಕ್ಕೆ ಹಾಕುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಂಬಳ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಈ ತಿಂಗಳ ಸಂಬಳವೇ ಆಗಿಲ್ಲ. ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ ಎಂದು ಸಾರಿಗೆ ನಿಗಮ ಇನ್ನೂ ವೇತನ ಪಾವತಿ ಮಾಡಿಲ್ಲ. ಪ್ರತಿ ತಿಂಗಳು 4 ರಿಂದ 10ನೇ ದಿನಾಂಕದೊಳಗ ವೇತನ ಆಗುತ್ತಿತ್ತು. ಆದರೆ ಈಗಾಗಲೇ ಅರ್ಧ ತಿಂಗಳು ಕಳೆದಿದ್ದರೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನೂ ಸಂಬಳವಾಗಿಲ್ಲ. ಸಂಬಳವಿಲ್ಲದೇ ಹಬ್ಬ ಮಾಡೋಕೆ ಕಷ್ಟ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಅಳಲು ತೊಡಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿತ್ತು. ಕಳೆದ ಸೆಪ್ಟೆಂಬರ್ ತಿಂಗಳ ತನಕ ರಾಜ್ಯ ಸರ್ಕಾರವೇ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಸಂಬಳ ನೀಡಿತ್ತು. ಆದರೆ ಈಗ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯೇ ತನ್ನ ಸಿಬ್ಬಂದಿಗೆ ವೇತನ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *