ದುಬೈ ಅನಿವಾಸಿ ಕನ್ನಡಿಗರ ಪರಿಶ್ರಮ – ಉತ್ತರ ಪ್ರದೇಶದ ಪ್ರಸಾದ್ ತಾಯ್ನಾಡಿಗೆ

ದುಬೈ: ಯುಎಇಯಲ್ಲಿ ಸಂಕಷ್ಟದಲ್ಲಿದ್ದ ಉತ್ತರ ಪ್ರದೇಶದ ಗೋರಕ್ ಪುರದ ನಿವಾಸಿ ಚಂಗೂರ್ ಪ್ರಸಾದ್ ನನ್ನು ಭಾರತೀಯ ರಾಯಭಾರಿ ಕಚೇರಿ ಸಹಕಾರದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುವಲ್ಲಿ ಕನ್ನಡಿಗಾಸ್ ಫೆಡರೇಷನ್ ಮತ್ತು ಏಮ್ ಇಂಡಿಯಾ ಫೌಂಡೇಶನ್ ಯಶಸ್ವಿಯಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ‘ದುಬೈನಲ್ಲಿ ಉದ್ಯೋಗ ಸಿಗುವುದಾಗಿ ಏಜೆಂಟ್ ನನ್ನು ನಂಬಿಕೊಂಡು ಬಂದು ಮೋಸ ಹೋದ ಬಡ ಕಾರ್ಮಿಕ, ಅನಕ್ಷರಸ್ಥ ಚಂಗೂರ್ ಪ್ರಸಾದ್ ತಿನ್ನಲು ಆಹಾರವಿಲ್ಲದೆ ದಿಕ್ಕು ತೋಚದೇ ತಿರುಗಾಡುತ್ತಿದ್ದಾಗ ಹಠಾತ್ತಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟನು. ಅಲ್ಲಿ ಪರೀಕ್ಷಿಸಿದಾಗ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆಂದು ತಿಳಿದು ಬಂತು.

ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ತಿಳಿದು ಭೇಟಿ ನೀಡಿದ ಏಮ್ ಇಂಡಿಯಾ ಫೌಂಡೇಶನ್ ನ ಶೇಕ್ ಮುಝಫ್ಫರ್, ಚಂಗೂರ್ ಪ್ರಸಾದ್ ಗೆ ಧೈರ್ಯ ತುಂಬಿ, ನನ್ನನ್ನು ಸಂಪರ್ಕಿಸಿದರು. ನಾವು ಚಂಗೂರ್ ಪ್ರಸಾದ್ ನಿಗೆ ಪ್ರಥಮ ಹಂತದಲ್ಲಿ ಬೇಕಾದ ಚಿಕಿತ್ಸೆಯನ್ನು ಶಾರ್ಜಾ ಖಾಸ್ಮಿಯಾ ಆಸ್ಪತ್ರೆಯಲ್ಲಿ ನೀಡಿ, ವೈದ್ಯರ ಸಲಹೆಯಂತೆ ಡಿಸ್ಚಾರ್ಜ್ ಮಾಡಿದೆವು. ಆಸ್ಪತ್ರೆಯಲ್ಲಿ ಇನ್ಶುರೆನ್ಸ್ ಮೂಲಕ ಸ್ವಲ್ಪ ರಿಯಾಯಿತಿ ಸಿಕ್ಕಿದರೂ 1ಲಕ್ಷ? ನಾವು ಪಾವತಿಸಿದೆವು. ಚಂಗೂರ್ ಪ್ರಸಾದನನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಲು ಸಹಪ್ರಯಾಣಿಕ ಬೇಕಾದ ಕಾರಣ ಆತನ ಮನೆಯವರನ್ನು ಸಂಪರ್ಕಿಸಿ, ಆತನ ಅಳಿಯನನ್ನು ದುಬೈಗೆ ಕರೆಸಿಕೊಂಡೆವು.

ಚಂಗೂರ್ ಪ್ರಸಾದ್ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಪಾಸ್ಪೋರ್ಟ್ ಕಳೆದುಕೊಂಡಿದ್ದ ಕಾರಣ, ಭಾರತಕ್ಕೆ ಕಳುಹಿಸಲು ಹೊಸದಾಗಿ ‘ವೈಟ್ ಪಾಸ್ಪೋರ್ಟ್’ ಎಮರ್ಜೆನ್ಸಿ ಸರ್ಟಿಫಿಕೇಟ್ ತಯಾರಾಗುವ ವರೆಗೂ ತಂಗಲು ಉತ್ತಮ ವಾತಾವರಣದ ಆವಶ್ಯಕತೆ ಇದ್ದ ಕಾರಣ, ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಛೇರ್ಮನ್ ಹಾಗೂ ಕೆಎನ್‍ಆರೈ ಯುಎಇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ತಕ್ಷಣವೇ ಸ್ಪಂದಿಸಿ, ‘ಎಲ್ಲಾ ಪೇಪರ್ ವರ್ಕ್ ಆಗುವ ವರೆಗೆ ನಮ್ಮ ಹೋಟೆಲ್ ನಲ್ಲಿಯೇ ತಂಗಲು ವ್ಯವಸ್ಥೆ, ಊಟ ತಿಂಡಿಯ ವ್ಯವಸ್ಥೆ ನಾನು ಮಾಡುವೆ’ ಎಂದು ಜವಾಬ್ದಾರಿ ಹೊತ್ತು 12 ದಿನ ನೆರವಾದರು.

ಎಮರ್ಜೆನ್ಸಿ ಸರ್ಟಿಫಿಕೇಟ್ ಮಾಡಲು ಹಲವು ಅಡಚಣೆಗಳು ಬಂದಾಗ ನೆರವಿಗೆ ಬಂದ ದುಬೈನ ಭಾರತೀಯ ರಾಯಭಾರಿ ಕಚೇರಿಯ ಕೌನ್ಸಲ್ ಜಿತೇಂದ್ರ ಸಿಂಗ್ ನೇಗಿ ಎಲ್ಲವನ್ನೂ ಸುಸೂತ್ರವಾಗಿ ನಿವಾರಿಸಿದರು ಮತ್ತು ಸಾಮಾಜಿಕ ಕಾರ್ಯಕರ್ತ ಗಿರೀಶ್ ಪಂಥ್ ಸಹಕರಿಸಿದರು. ಪೊಲೀಸ್ ರಿಪೋರ್ಟ್, ಇಮಿಗ್ರೇಷನ್ ಕೆಲಸವನ್ನು ಮುಝಫ್ಫರ್ ಮತ್ತು ಇಮ್ರಾನ್ ಎರ್ಮಾಳ್ ಪೂರ್ಣಗೊಳಿಸಿದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನದಿಂದ ಭಾರತದಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ಪಡೆಯುವ ವರೆಗೂ ದೈನಂದಿನವಾಗಿ ಬೇಕಾದ ದುಬಾರಿ ಔಷಧ ಹಾಗೂ ತಾಯ್ನಾಡಿಗೆ ತಲುಪಿಸಲು ಬೇಕಾದ ಎಲ್ಲಾ ವ್ಯವಸ್ಥೆಗೆ ಸುಮಾರು 2.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ನಮ್ಮ ತಂಡ ಕೊನೆಗೂ ದುಬೈನಿಂದ ಉತ್ತರ ಪ್ರದೇಶದ ಲಕ್ನೋಗೆ ತಲುಪಿ ಅಲ್ಲಿಂದ ಗೋರಕ್’ಪುರದ ಆತನ ಕುಟುಂಬದ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಪಾಸ್ಪೋರ್ಟ್ ಕಳೆದುಕೊಂಡು, ಹಣವೂ ಇಲ್ಲದೇ, ಭಾರತಕ್ಕೆ ಮರಳುವ ಆಸೆಯನ್ನೇ ಕೈಬಿಟ್ಟು ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಮಲಗಿದ್ದ ಚಂಗೂರ್ ಪ್ರಸಾದ್ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ತಾಯ್ನಾಡಿಗೆ ತಲುಪಿ ತನ್ನ ಪತ್ನಿ ಮಕ್ಕಳೊಂದಿಗೆ ನಗುತ್ತಾ ಸಂತಸದಿಂದಿರುವ ಪೋಟೋ ಕಳುಹಿಸಿದ್ದಾನೆ. ಅವನ ಮುಂದಿನ ಚಿಕಿತ್ಸೆ ಕುರಿತು ಉತ್ತರ ಪ್ರದೇಶದ ಆಸ್ಪತ್ರೆಯಲ್ಲೂ ನಾವು ಮಾತುಕತೆ ನಡೆಸುತ್ತಿದ್ದೇವೆ.’ ಎಂದು ಹಿದಾಯತ್ ಅಡ್ಡೂರ್ ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *