ದಿವ್ಯ ಸುರೇಶ್ ಪ್ರೀತಿಸ್ತಿದ್ದ ಬ್ರೋ ಗೌಡ – ಬಂಡೆಯಾಗಿ ಎದುರು ಬಂದ ಲ್ಯಾಗ್ ಮಂಜು

ಬೆಂಗಳೂರು: ಎರಡನೇ ಬಾರಿ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಬ್ರೋ ಗೌಡ ಈ ಹಿಂದೆ ಸ್ಪರ್ಧಿಯೊಬ್ಬರನ್ನು ಲವ್ ಮಾಡುತ್ತಿರುವುದಾಗಿ ಕೆಲವು ಸದಸ್ಯರ ಮುಂದೆ ಹೇಳಿಕೊಂಡಿದ್ದರು. ಅಂತೆಯೇ ಆ ಬಳಿಕ ಶಮಂತ್ ಇಷ್ಟಪಟ್ಟ ಹುಡುಗಿ ಯಾರಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಆದರೆ ಇದೀಗ ಬ್ರೋ ಗೌಡ ತಾನಿಷ್ಟಪಟ್ಟ ಹುಡುಗಿ ಯಾರೆಂಬುದನ್ನು ಬಹಿರಂಗಪಡಿಸಿದ್ದು, ನಿರಾಸೆಯನ್ನೂ ಕೂಡ ವ್ಯಕ್ತಪಡಿಸಿದ್ದಾರೆ.

ಹೌದು. ಶಮಂತ್ ಅವರು ತಾನಿಷ್ಟಪಟ್ಟ ಹುಡುಗಿಯ ಹೆಸರನ್ನು ಬಹಿರಂಗಪಡಿಸಿದ್ದು, ಆಕೆಯನ್ನು ಪ್ರೀತಿಸುತ್ತಿದ್ದೆ. ಆದರೆ ಮಂಜು ಪಾವಗಡ ಬಂಡೆಯಾಗಿ ಅಡ್ಡಿಯಾದರು ಎನ್ನುವ ಮೂಲಕ ತಮಗಾದ ನಿರಾಸೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದು ಅಲ್ಲದೆ ಅದರಿಂದ ಆದ ನಿರಾಸೆಯನ್ನು ಕೂಡ ಇತರ ಸದಸ್ಯರೊಂದಿಗೆ ಹೇಳಿಕೊಂಡಿದ್ದಾರೆ.

ಮಿಸ್ ಇಂಡಿಯಾ ಸೌತ್ ವಿಜೇತೆ ದಿವ್ಯ ಸುರೇಶ್ ಅವರನ್ನೇ ಬ್ರೋ ಗೌಡ ಇಷ್ಟಪಟ್ಟಿದ್ರಂತೆ. ಆದರೆ ಬ್ರೋ ಗೌಡ ಪಾಲಿಗೆ ಮಂಜು ಬಂಡೆಯಾಗಿ ಎದುರು ನಿಂತಿರುವುದಾಗಿ ಮನೆಯ ಇತರ ಸದಸ್ಯರ ಬಳಿ ಬ್ರೋ ಗೌಡ ತಮ್ಮ ನಿರಾಸೆಯನ್ನು ತೋರ್ಪಡಿಸಿದ್ದಾರೆ.

ಗೀತಾ ಭಟ್, ಚಂದ್ರಕಲಾ ಮೋಹನ್, ಧನುಶ್ರೀ ಹಾಗೂ ಶಮಂತ್ ನಾಲ್ಕು ಜನ ಕಿಚನ್‍ನಲ್ಲಿರುವಾಗ ಶಮಂತ್ ಪ್ರೇಮ ವಿಚಾರ ಚರ್ಚೆಯಾಗಿದೆ. ಈ ಹಿಂದೆ ವಿಷಯ ನಿರ್ಮಲಾ ಮತ್ತು ಗೀತಾ ಭಟ್ ಇಬ್ಬರಿಗೆ ಮಾತ್ರ ತಿಳಿದಿತ್ತು. ಆದರೆ ಹುಡುಗಿ ಯಾರೆಂದು ಗೊತ್ತಾಗದೆ ಗೀತಾ ಅವರು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದರು. ಇದೀಗ ಕಿಚನ್ ನಲ್ಲಿ ನಡೆದ ಚರ್ಚೆಯಲ್ಲಿ ಶಮಂತ್ ತಾನು ಇಷ್ಟ ಪಡುತ್ತಿರುವ ಹುಡುಗಿ ದಿವ್ಯ ಸುರೇಶ್ ಎಂದು ಬಹಿರಂಗಪಡಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಇತ್ತ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ಗೆಳೆತನ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಬರುತ್ತಿದೆ. ಮೊದ ಮೊದಲು ಮಂಜು ಅವರ ತಮಾಷೆಯ ಮಾತುಗಳಿಗೆ ಸಿಟ್ಟುಮಾಡಿಕೊಳ್ಳುತ್ತಿದ್ದ ದಿವ್ಯ ಇದೀಗ ತಾವು ಕೂಡ ಸಪೋರ್ಟ್ ಮಾಡುತ್ತಿದ್ದಾರೆ. ಅಲ್ಲದೆ ಮಂಜು ಮತ್ತು ದಿವ್ಯಗೆ ಮದುವೆ ಆಗಿದೆ. ಅವರಿಬ್ಬರು ಗಂಡ-ಹೆಂಡತಿ ಎಂದೆಲ್ಲ ಮನೆಯವರು ರೇಗಿಸಿದ್ದಾರೆ.

ಒಟ್ಟಿನಲ್ಲಿ ಪ್ರತಿ ಬಿಗ್ ಬಾಸ್ ಶೋನಲ್ಲಿ ಒಂದೊಂದು ಪ್ರೇಮ ಕಥೆಗಳು ಹೊರಬರುತ್ತಿದ್ದಂತೆಯೇ ಈ ಬಾರಿಯೂ ಅಂಥದ್ದೇ ಕಥೆಯೊಂದು ಹೊರಬರುವ ಸಾಧ್ಯತೆಗಳಿವೆ. ಆದರೆ ತ್ರಿಕೋನ ಪ್ರೇಮ ಕಥೆ ಎಲ್ಲಿವರೆಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *