ದಿವಂಗತ ಸುರೇಶ್ ಅಂಗಡಿ ಕುಟುಂಬಕ್ಕೆ ರಾಜ್ಯಪಾಲರಿಂದ ಸಾಂತ್ವನ

ಬೆಳಗಾವಿ: ಕೇಂದ್ರ ಸಚಿವ, ಬೆಳಗಾವಿ ಸಂಸದರಾಗಿದ್ದ ದಿ.ಸುರೇಶ್ ಅಂಗಡಿ ಮನೆಗೆ ರಾಜ್ಯಪಾಲ ವಜುಭಾಯಿ ವಾಲಾ ಭೇಟಿ ನೀಡಿದರು. ಬೆಳಗಾವಿಯ ಸದಾಶಿವ ನಗರದಲ್ಲಿರುವ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ರಾಜ್ಯಪಾಲರು, ಅಂಗಡಿ ಪತ್ನಿ, ತಾಯಿ ಹಾಗೂ ಮಕ್ಕಳನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು.

ರಾಣಿ ಚೆನ್ನಮ್ಮ ವಿವಿಯ ಘಟಿಕೋತ್ಸವ ಕಾರ್ಯಕ್ರಮ ಮುಗಿಸಿ ಸುರೇಶ್ ಅಂಗಡಿ ಮನೆಗೆ ಭೇಟಿದ ರಾಜ್ಯಪಾಲರು, ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಭಾವಚಿತ್ರಕ್ಕೆ ಪುಪ್ಪ ಅರ್ಪಿಸಿದರು. ಈ ವೇಳೆ ಪತ್ನಿ ಮಂಗಳಾ, ತಾಯಿ ಸೋಮವ್ವ, ಪುತ್ರಿಯರಾದ ಸ್ಫೂರ್ತಿ ಹಾಗೂ ಶ್ರದ್ಧಾಗೆ ಸಾಂತ್ವನ ಹೇಳಿದರು.

ಸುರೇಶ್ ಅಂಗಡಿ ಉತ್ತಮ ಸಂಸದೀಯ ಪಟುವಾಗಿದ್ದರು. ರೈಲ್ವೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದರು ಎಂದು ಅಂಗಡಿ ಕಾರ್ಯಯನ್ನ ಕೊಂಡಾಡಿದರು. ಈ ವೇಳೆ ಪುತ್ರಿಯರ ಶಿಕ್ಷಣ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲರು, ಏನಾದ್ರು ಸಹಾಯ ಬೇಕಾದ್ರೆ ರಾಜ್ಯಪಾಲರ ಕಚೇರಿಯನ್ನ ಸಂಪರ್ಕಿಸುವಂತೆ ತಿಳಿಸಿದರು.

ರಾಜ್ಯಪಾಲರ ಭೇಟಿ ವೇಳೆ ಸುರೇಶ್ ಅಂಗಡಿ ಪತ್ನಿ ಹಾಗೂ ತಾಯಿ ಕಣ್ಣೀರು ಸುರಿಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ರಾಜ್ಯಪಾಲರು ಸರಳತೆ ಮೆರೆದಿದ್ದು ವಿಶೇಷವಾಗಿತ್ತು.

ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುರೇಶ್ ಅಂಗಡಿ ಪ್ರತಿನಿಧಿಸುತ್ತಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದರು. ಕೇಂದ್ರ ಸಚಿವ ಸಂಪುಟದ ರಾಜ್ಯ ರೈಲ್ವೇ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಅಧಿವೇಶನ ಆರಂಭವಾದಾಗ ಎಲ್ಲ ಸಂಸದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಂಗಡಿ ಅವರಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಹೀಗಾಗಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಸೆ.23ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದರು.

Comments

Leave a Reply

Your email address will not be published. Required fields are marked *