Exclusive : ದಿಢೀರ್ ತೇಲಿಬಂತು ನಿರಾಣಿ ಮನೆಯಲ್ಲಿನ ಕತ್ತಿ, ರಾಮದಾಸ್ ಸಭೆಯ ಫೋಟೋ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಬಂಡಾಯ ಏಳಲು ಶಾಸಕರು ಸಭೆ ನಡೆಸಿದ್ದಾರೆ ಎಂಬ ಸುದ್ದಿಯ ನಡುವೆ ಮೂವರು ಬಿಜೆಪಿ ಶಾಸಕರು ಮಾತುಕತೆ ನಡೆಸುತ್ತಿರುವ ಫೋಟೋ ಈಗ ಲಭ್ಯವಾಗಿದೆ.

ಮುರುಗೇಶ್ ನಿರಾಣಿ ನಿವಾಸದಲ್ಲಿ ಉಮೇಶ್ ಕತ್ತಿ, ರಾಮದಾಸ್ ಸಭೆ ನಡೆಸುತ್ತಿರುವ ಫೋಟೋ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಮೂಲಗಳಿಂದ ಬಂದಿರುವ ಫೋಟೋ ವಿಚಾರವಾಗಿ ಸ್ಪಷ್ಟನೆ ಪಡೆಯಲು ಪಬ್ಲಿಕ್ ಟಿವಿ ನಿರಾಣಿಯವರನ್ನು ಸಂಪರ್ಕಿಸಿದೆ. ಈ ವೇಳೆ ನಿರಾಣಿಯವರು, ನಾನು ಮೊನ್ನೆ ನಡೆದ ಸಭೆಯಲ್ಲಿ ಭಾಗವಹಿಸಲಿಲ್ಲ. ಇದು ಎರಡು ತಿಂಗಳ ಹಿಂದೆ ನಡೆದ ಮಾತುಕತೆ. ಕೊರೊನಾ ಬರುವುದಕ್ಕೆ ಮೊದಲು ಈ ಮಾತುಕತೆ ನಡೆದಿದೆ. ನಾವೆಲ್ಲ ಸ್ನೇಹಿತರು. ಹೀಗಾಗಿ ರಾಮದಾಸ್ ಮತ್ತು ಕತ್ತಿಯವರು ನನ್ನ ನಿವಾಸಕ್ಕೆ ಬಂದಿದ್ದಾರೆ. ಇದು ಯಡಿಯೂರಪ್ಪನವರ ವಿರುದ್ಧದ ಸಭೆಯಲ್ಲ ಎಂದು ಸ್ಪಷ್ಟನೆ ನೀಡಿದರು.

ನಿಮ್ಮ ಮನೆಯಲ್ಲೇ ತೆಗೆದ ಈ ಫೋಟೋ ಹೇಗೆ ಸಿಎಂ ಪಾಳೆಯಕ್ಕೆ ಸಿಕ್ಕಿತು ಎಂದು ಪ್ರಶ್ನಿಸಿದ್ದಕ್ಕೆ, ಅದು ಗೊತ್ತಿಲ್ಲ. ಯಾರೋ ಬಂದವರು ತೆಗೆದಿರಬಹುದು. ನಾವು ಅಭಿವೃದ್ಧಿ ವಿಚಾರ ಚರ್ಚೆ ಮಾಡಿದ್ದೇವೆ. ಯಡಿಯೂರಪ್ಪನವರನ್ನು ಇಳಿಸುವ ಸಂಬಂಧ ಮಾತುಕತೆ ನಡೆಸಿಲ್ಲ. ಮೊನ್ನೆ ನಡೆದ ಸಭೆಯಲ್ಲಿ ನಾನು ಭಾಗವಹಿಸಿದ್ದು ಸಾಬೀತಾದ್ರೆ ರಾಜೀನಾಮೆ ನೀಡುತ್ತೇನೆ ಎಂದು ಉತ್ತರಿಸಿದರು.

ನಿಮ್ಮ ಮನೆಯಲ್ಲಿ ವಿರೋಧಿಗಳು ಇದ್ದಾರಾ? ನಿಮ್ಮ ಮನೆಯ ಫೋಟೋ ಬೇರೆಯವರಿಗೆ ಸಿಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ನಿರಾಣಿ ಅವರಿಂದ ಸರಿಯಾದ ಸ್ಪಷ್ಟನೆ ಸಿಗಲಿಲ್ಲ. ಸಿಎಂ ವಿರುದ್ಧ ಸಭೆಯಲ್ಲಿ ಪಾಲ್ಗೊಂಡ ನಾಯಕರ ಪೈಕಿ ಯಾರೊ ಒಬ್ಬರಿಂದ ಈ ಫೋಟೋ ಈಗ ಹೊರಗಡೆ ಬಂದಿದೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *