ದಕ್ಷಿಣ ಆಫ್ರಿಕಾ ಮೂಲದ ಡ್ರಗ್ಸ್ ಮಾರಾಟಗಾರನ ಬಂಧನ

ಮಡಿಕೇರಿ: ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವಿದೇಶಿ ಆರೋಪಿಯನ್ನು ಕೊಡಗು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಎಕ್ರಾ ರಾಜ್ಯದ ಕುಂಸ್ಸೆ ಗ್ರಾಮದ ಒಪೊಂಗ್ ಸ್ಯಾಮ್ಪ್ಸನ್ ಬಂಧಿತ ಆರೋಪಿ. ಆಗಸ್ಟ್ 28 ರಂದು ಮಡಿಕೇರಿಯ ರಾಜಾಶೀಟ್ ಬಳಿ ಆ್ಯಂಪೆಟಮಿನ್ ಡ್ರಗ್ಸ್ ಮಾರಾಟಕ್ಕೆ ಈತ ಪ್ರಯತ್ನಿಸುತ್ತಿದ್ದ. ಈ ಮಾಹಿತಿ ಕಲೆಹಾಕಿದ್ದ ಡಿಸಿಐಬಿ ಪೊಲೀಸರು, ದಾಳಿ ನಡೆಸಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯ್ಯಂಗೇರಿಯ ಇಬ್ಬರನ್ನು ಬಂಧಿಸಿದ್ದರು.

ಇವರನ್ನು ಬಂಧಿಸುವಷ್ಟರಲ್ಲಿ ಆರೋಪಿ ಒಪೊಂಗ್ ಸ್ಯಾಮ್ಪ್ಸನ್ ಸ್ಥಳದಿಂದ ಪರಾರಿ ಆಗಿದ್ದ. ಈತ ಲಕ್ಷಾಂತರ ರೂಪಾಯಿ ಮೌಲ್ಯದ ಆ್ಯಂಪೆಟಮಿನ್ ಡ್ರಗ್ಸನ್ನು ಮಾರಾಟ ಮಾಡುತ್ತಿದ್ದನು. ಒಪೊಂಗ್ ಕೇರಳ ಸೇರಿದಂತೆ ಇತರ ರಾಜ್ಯಗಳೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಆರೋಪಿಗಾಗಿ ಬಲೆಬೀಸಿದ್ದರು. ವೃತ್ತಿಯಿಂದ ವೇಟ್ ಲಿಫ್ಟಿರ್ ಆಗಿರುವ ಒಪೊಂಗ್ ಸ್ಯಾಮ್ಪ್ಸನ್, ಬೆಂಗಳೂರಿನ ಹೊರಮಾವಿನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿಯ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *