ದಂಡ ಪಾವತಿಸಿ ಖೈದಿಗಳನ್ನು ಬಿಡಿಸಿದ ಡಾ. ವಿಷ್ಣುವರ್ಧನ್ ಅಭಿಮಾನಿಗಳು

– ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ ವಿಷ್ಣುಸೇನಾದಿಂದ ಮಾನವೀಯ ಕಾರ್ಯ

ಧಾರವಾಡ: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ವಿಷ್ಣುಸೇನಾ ಧಾರವಾಡ ಜಿಲ್ಲಾ ಘಟಕದ ಸದಸ್ಯರು, ಇಬ್ಬರು ಕೈದಿಗಳ ದಂಡದ ಹಣ ಪಾವತಿಸಿ ಜೈಲಿನಿಂದ ಬಿಡಿಸುವ ಮಾನವೀಯ ಕಾರ್ಯ ಮಾಡಿದ್ದಾರೆ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ತಮ್ಮ ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಸಹ ಇಬ್ಬರು ಖೈದಿಗಳು ಜೈಲಿನಲ್ಲೆ ಇದ್ದರು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಮಹಾದೇವಪ್ಪ ಉದಗಟ್ಟಿ ಮತ್ತು ಹುಬ್ಬಳ್ಳಿಯ ವಾಸು ಕಾಟೀಗರ ಎಂಬಿಬ್ಬರು ತಮಗೆ ವಿಧಿಸಿದ್ದ ದಂಡದ ಹಣ ಹತ್ತು ಸಾವಿರ ರೂಪಾಯಿ ತುಂಬಲಾಗದೇ ಜೈಲು ಶಿಕ್ಷೆಯಲ್ಲಿಯೇ ಮುಂದುವರೆದಿದ್ದರು.

ಆದರೆ ವಿಷ್ಣುವರ್ಧನ್‍ರ ಜನ್ಮದಿನದ ಪ್ರಯುಕ್ತ ಇವರಿಬ್ಬರ ದಂಡದ ಹಣ ತಲಾ ಹತ್ತು ಸಾವಿರ ರೂಪಾಯಿ ಪಾವತಿ ಮಾಡಿದ ವಿಷ್ಣು ಸೇನಾ ಜಿಲ್ಲಾ ಘಟಕದ ಸದಸ್ಯರು, ಇಬ್ಬರನ್ನು ಧಾರವಾಡ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಿದರು. ವಿಷ್ಣು ಸೇನಾ ಧಾರವಾಡ ಘಟಕದ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ ನೇತೃತ್ವದಲ್ಲಿ ಇಬ್ಬರನ್ನೂ ಬಿಡುಗಡೆ ಮಾಡಿಸುವ ಮೂಲಕ ವಿಷ್ಣುವರ್ಧನ್ ಅವರ ಜನ್ಮದಿನ ಆಚರಿಸಲಾಯಿತು. ಜೈಲಿನಿಂದ ಬಿಡುಗಡೆಗೊಂಡ ಇಬ್ಬರು ಕೈದಿಗಳು ವಿಷ್ಣು ಸೇನೆಗೆ ಕೃತಜ್ಞತೆ ಸಲ್ಲಿಸಿದರು.

Comments

Leave a Reply

Your email address will not be published. Required fields are marked *