ತೆಲುಗಿನಲ್ಲಿ ಭಾರೀ ಮೊತ್ತಕ್ಕೆ ರಾಕಿ ಭಾಯ್ ಸಿನಿಮಾ ಸೇಲ್

ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ತೆಲುಗಿನಲ್ಲಿ ಮಾರಾಟವಾಗಿದೆ. ಈಗಾಗಲೇ ಕೆಜಿಎಫ್-2 ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬರೋಬ್ಬರಿ 65 ಕೋಟಿ ರೂ.ಗೆ ಕೆಜಿಎಫ್-2 ಸಿನಿಮಾ ಬಿಡುಗಡೆ ರೈಟ್ಸ್‍ನನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೆಜಿಎಫ್-1 ಅಮೆಜಾನ್ ಪ್ರೈಮ್ ಸೇರಿದಂತೆ ಡಿಜಿಟಲ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಹಣ ಗಳಿಸುವ ಮೂಲಕ ಈ ಹಿಂದೆ ಹೊಸ ದಾಖಲೆ ಸೃಷ್ಟಿಸಿತ್ತು. ಅಲ್ಲದೆ ಕೆಜಿಎಫ್-1 ಬಿಡುಗಡೆಯ ಹಕ್ಕನ್ನು ಈ ಮುನ್ನ ಕೇವಲ 5 ಕೋಟಿಗೆ ಖರೀದಿಸಲಾಗಿತ್ತು. ಆದರೆ ಅದರಿಂದ ಬಂದ ಲಾಭ ಬರೋಬ್ಬರಿ 12 ಕೋಟಿ. ಹಾಗಾಗಿ ಕೆಜಿಎಫ್-1ರ ಯಶಸ್ಸು ಕಂಡ ಹಲವಾರು ತೆಲುಗು ನಿರ್ಮಾಪಕರು ಕೆಜಿಎಫ್-2 ಸಿನಿಮಾದ ಬಿಡುಗಡೆ ಹಕ್ಕನ್ನು ಖರೀದಿಸಲು ನಾ ಮುಂದು, ತಾ ಮುಂದು ಎಂದು ಸಾಲಿನಲ್ಲಿ ನಿಂತಿದ್ದರು.

ನಿರ್ಮಾಪಕ ವಿಜಯ್ ಕಿರಂಗದೂರು 70 ಕೋಟಿ ಬೇಡಿಕೆ ಇಟ್ಟಿದ್ದನ್ನು ನೋಡಿ ಹಲವು ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದರು. ಟಾಲಿವುಡ್‍ನ ಖ್ಯಾತ ನಿರ್ಮಾಪಕ ದಿಲ್ ರಾಜು, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಎರಡು ತೆಲುಗು ರಾಜ್ಯಗಳಲ್ಲೂ ಕೆಜಿಎಫ್-2 ಸಿನಿಮಾ ಬಿಡುಗಡೆಯ ಹಕ್ಕನ್ನು 65 ಕೋಟಿ ರೂ.ಗೆ ಮಾತನಾಡಿ ಖರೀದಿಸುವ ಮೂಲಕ ಎಲ್ಲಾ ನಿರ್ಮಾಪಕರು ಗಪ್-ಚುಪ್‍ಗೊಳ್ಳುವಂತೆ ಮಾಡಿದ್ದಾರೆ.

ಸದ್ಯ ಕೆಜಿಎಫ್-2 ಸಿನಿಮಾ ಬಿಡುಗಡೆಗೂ ಮುನ್ನವೇ ತೆಲುಗಿನಲ್ಲಿ ದೊಡ್ಡ ಬಿಸಿನೆಸ್ ಮಾಡುವ ಮೂಲಕ ಟಾಲಿವುಡ್ ಬಹುದೊಡ್ಡ ನಿರ್ಮಾಪಕ ದಿಲ್ ರಾಜುರವರ ಕೈ ಸೇರಿದೆ. ಅಲ್ಲದೆ ನಿರ್ಮಾಪಕ ದಿಲ್ ರಾಜು, ವಿಜಯ್ ಕಿರಂಗದೂರುರವರಿಗೆ ಮುಂಗಡವಾಗಿಯೂ ಹಣ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಹೈದರಾಬಾದ್‍ನಲ್ಲಿ ನಿರ್ಮಾಪಕ ದಿಲ್ ರಾಜು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಬರ್ತ್‍ಡೇಗೆ ದಕ್ಷಿಣ ಭಾರತದ ಗಣ್ಯಾತಿಗಣ್ಯರು ಆಗಮಿಸಿದ್ದರು ಹಾಗೂ ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್, ವಿಜಯ್ ಕಿರಂಗದೂರು ಅವರನ್ನು ಆಹ್ವಾನಿಸಿದ್ದರು.

Comments

Leave a Reply

Your email address will not be published. Required fields are marked *