– 144 ಸೆಕ್ಷನ್ ಜಾರಿ, ಲಘು ಲಾಠಿ ಚಾರ್ಜ್
– ಸ್ಥಳಕ್ಕೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ
ಬೆಂಗಳೂರು: ಕೋವಿಡ್ 19 ಹಾಟ್‍ಸ್ಪಾಟ್ ಆಗಿದ್ದ ಪಾದರಾಯನಪುರದ ಪಾಲಿಕೆ ಸದಸ್ಯ ಇಮ್ರಾನ್ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.
ಕೋವಿಡ್ 19 ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಮ್ರಾನ್ ಪಾಷಾ ಇಂದು ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಪಾಷಾರನ್ನು ಕಾರ್ಯಕರ್ತರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಾದರಾಯನಪುರದಲ್ಲಿರುವ ನಿವಾಸಕ್ಕೆ ಕರೆ ತಂದಿದ್ದಾರೆ.

ಈ ವೇಳೆ ಬೈಕ್ ಗಳಲ್ಲಿ ಕುಳಿತವರಯ ಹಲ್ಮೆಟ್ ಇಲ್ಲದೇ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂದಿದ್ದರೂ ಗುಂಪಾಗಿ ಮೆರವಣಿಗೆ ಮಾಡಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜಕೀಯ ಮೆರವಣಿಗೆ ನಡೆಸಬಾರದು ಎಂದು ಸೂಚಿಸಿದ್ದರೂ ಭಾರೀ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಕೋವಿಡ್ 19 ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಪೊಲೀಸರು ಇಮ್ರಾನ್ ಪಾಷಾರನ್ನು ಬಂಧಿಸಿದ್ದಾರೆ.
ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಹಾಟ್ ಸ್ಪಾಟ್ ಆಗಿದ್ದ ಪ್ರದೇಶದಲ್ಲಿ ಮೆರವಣಿಗೆ ನಡೆಸುತ್ತಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಗಮಿಸಿರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಬೇಜವಾಬ್ದಾರಿ ನಡೆಯಾಗಿದೆ. ಕ್ರಿಮಿನಲ್ ಅಪರಾಧವಾಗಿದ್ದು ಇದಕ್ಕಾಗಿ ಸ್ಥಳಕ್ಕೆ ನಾನೇ ಬಂದಿದ್ದೇನೆ. ಸೂಕ್ಷ್ಮ ವಲಯವಾಗಿರುವ ಈ ಸ್ಥಳದಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ್ದಕ್ಕೆ ಬಂಧಿಸಲಾಗಿದೆ ಎಂದು ತಿಳಿಸಿದರು.
ತೆರೆದ ಕಾರಿನಲ್ಲಿ ಹೂ ಮಳೆಯೊಂದಿಗೆ ಕ್ಷೇತ್ರಕ್ಕೆ ಬರುತ್ತಿದ್ದ ಇಮ್ರಾನ್ ಪಾಷಾರನ್ನು ನಡೆಸಿಕೊಂಡೇ ಠಾಣೆಗೆ ಕರೆಸಿಕೊಂಡು ಹೋಗಿ ಬಂಧಿಸಿದ್ದಾರೆ. ಈಗ ಪಾದಾರಾಯನಪುರದಲ್ಲಿ 144 ಸೆಕ್ಷನ್ ವಿಧಿಸಲಾಗಿದ್ದು ಎಲ್ಲ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ಬಂಧನ ಮಾಡಿದ ಬಳಿಕ ಪಾಷಾರನ್ನು ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಲಘು ಲಾಠಿ ಚಾರ್ಜ್ ಮಾಡಿ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.


Leave a Reply