ತೆಂಗಿನ ಎಣ್ಣೆಯಿಂದ ಸ್ಯಾನಿಟೈಸರ್ ಸಂಶೋಧಿಸಿದ ವಿದ್ಯಾರ್ಥಿ

ತುಮಕೂರು: ಕೊರೊನಾ ತಡೆಗೆ ಈಗ ಸ್ಯಾನಿಟೈಸರ್ ಕೂಡ ಒಂದು ಮದ್ದಾಗಿದೆ. ಹೀಗಾಗಿ ಕಲ್ಪತರು ನಾಡಿನ ವಿದ್ಯಾರ್ಥಿಯೋರ್ವ ತೆಂಗಿನ ಎಣ್ಣೆ ಬಳಸಿಕೊಂಡು ಸ್ಯಾನಿಟೈಸರ್ ಸಂಶೋಧಿಸಿದ್ದಾರೆ.

ಜಗತ್ತನೇ ನಡುಗಿಸುತ್ತಿರೋ ಕೊರೊನಾ ವೈರಸ್ ತಡೆಗಟ್ಟೋಕೆ ಮತ್ತೊಂದು ರೀತಿಯ ಸ್ಯಾನಿಟೇಸರ್ ಹೊರತರೋಕೆ ವಿದ್ಯಾರ್ಥಿ ಕಾಯುತ್ತಿದ್ದಾರೆ. ತುಮಕೂರು ನಗರದ ಎಸ್‍ಐಟಿ ಕಾಲೇಜಿನ ಎಂಜಿನಿಯರಿಂಗ್ ಬಯೋಕೆಮಿಕಲ್ ವಿಭಾಗದ ವಿಧ್ಯಾರ್ಥಿ ಎಚ್.ಎನ್.ಚಿದಾನಂದ್ ಹೊಸ ಸ್ಯಾನಿಟೈಸರ್ ಸಂಶೋಧಿಸಿದ್ದು, ಆ ಮೂಲಕ ಗಮನ ಸೆಳೆದಿದ್ದಾರೆ.

ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ‘ಕಲ್ಪಶುದ್ಧಿ’ ಎಂಬ ಹೆಸರಿನ ಸ್ಯಾನಿಟೈಸರ್ ಜನರಿಗೆ ತಲುಪಲಿದೆ. ಎಸ್‍ಐಟಿಯಲ್ಲಿ ಜೈವಿಕ ತಂತ್ರಜ್ಞಾನ ವ್ಯಾಸಂಗ ಪೂರ್ಣಗೊಳಿಸಿರುವ ಚಿದಾನಂದ್, ಮತ್ತೊಂದು ಹೆಜ್ಜೆ ಮುಂದಿಟ್ಟು ತೆಂಗಿನ ಎಣ್ಣೆಯಲ್ಲಿ ಸ್ಯಾನಿಟೈಸ್ ರೂಪಿಸಿದ್ದು, ಅನುಮತಿಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಪೇಟೆಂಟ್ ಪಡೆಯುವ ದಿಕ್ಕಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ತೊಡಗಿದ್ದಾರೆ.

ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆ್ಯಸಿಡ್ ಅಂಶ ಇರುತ್ತದೆ. ಇದು ಕೊರೊನಾ ಸೋಂಕಿನ ಲಿಪಿಡ್ ಲೆಯರ್ ನಾಶಗೊಳಿಸುತ್ತದೆ. ಸಾಮಾನ್ಯವಾಗಿ ಕೊರೊನಾ ಸೇರಿದಂತೆ ಬಹುತೇಕ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳಲ್ಲಿ ಲಿಪಿಡ್ ಲೆಯರ್ ಇರುತ್ತದೆ. ಕೊರೊನಾ ಸೋಂಕಿನಲ್ಲಿ ಈ ಲಿಪಿಡ್ ಲೆಯರ್ ಇದೆ. ತೆಂಗಿನ ಎಣ್ಣೆಗೆ ಶೇ.70ರಷ್ಟು ಆಲ್ಕೊಹಾಲ್ ಮತ್ತು ಲೆಮನ್ ಆಯಿಲ್ ಸೇರಿಸಿ ಸ್ಯಾನಿಟೈಸ್ ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಆಯುಷ್ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು. ಅವರು ಇದನ್ನು ಸಂಶೋಧನೆಗೂ ಒಳಪಡಿಸಬಹುದು. ಆ ಪ್ರಕ್ರಿಯೆಗಳು ಮುಗಿದ ಮೇಲೆ ಬಿಡುಗಡೆ ಮಾಡುತ್ತೇನೆ ಎಂದು ಚಿದಾನಂದ್ ತಿಳಿಸಿದ್ದಾರೆ.

ಸರ್ಕಾರ ನಿಗದಿಪಡಿಸಿರುವ 100 ಎಂಎಲ್ ಸ್ಯಾನಿಟೈಸರ್ ಗೆ 50 ರೂ. ರಂತೆ ದರ ನಿಗದಿಪಡಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಈ ಮೂಲಕ ತೆಂಗಿಗೂ ಮತ್ತಷ್ಟು ಬೆಲೆ ಬರುವ ಸಾಧ್ಯತೆ ಇದೆ. ಈಗಾಗಲೇ ಇವರ ಸ್ಯಾನಿಟೈಸರ್ ವಿಚಾರ ಸರ್ಕಾರದ ಅಂಗಳ ತಲುಪಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *