ತೀರ್ಥಹಳ್ಳಿ ಪಟ್ಟಣದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ

– ಬಾಳೇಬೈಲು ಬಳಿಯ ನರ್ಸ್‍ಗೆ ಕೊರೊನಾ
– ಮನೆ, ಹೋಟೆಲ್ ಸೀಲ್ ಡೌನ್

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ವರೆಗೆ ತೀರ್ಥಹಳ್ಳಿ ತಾಲೂಕಿನ 7 ಮಂದಿಗೆ ಸೋಂಕು ಪತ್ತೆಯಾಗಿತ್ತು. ಆದರೆ ಇದೀಗ 8ನೇ ಪ್ರಕರಣ ಪತ್ತೆಯಾಗಿದೆ. ಇದು ತೀರ್ಥಹಳ್ಳಿ ಪಟ್ಟಣದಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ.

ಈ ಬಾರಿ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲುವಿನ 33 ವರ್ಷದ ನರ್ಸ್ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪದ ಮನೆ, ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಪಾಸಿಟಿವ್ ಪತ್ತೆಯಾದ ನರ್ಸ್ ಕುಟುಂಬದ 8 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಕೊರೊನಾ ಪಾಸಿಟಿವ್ ಬಂದಿರುವ ಮಹಿಳೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಸೋಂಕಿತ ನರ್ಸ್ ಉಡುಪಿಯ ಅಜ್ಜರಕಾಡು ಹೆಬ್ರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸೋಂಕು ತಗುಲಿರಬಹುದು ಎಂಬ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅವರ ಮನೆ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ. ತೀರ್ಥಹಳ್ಳಿಯ ಇಂದಿರಾನಗರಕ್ಕೆ ಹೋಗುವ ರಸ್ತೆಯಿಂದ ಸುಮಾರು 300 ಮೀಟರ್ ಸೀಲ್ ಡೌನ್ ಮಾಡಲಾಗಿದೆ.

ಇಲ್ಲಿ 4 ಕುಟುಂಬಗಳಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ನರ್ಸ್ ಪತಿ ಆಟೋ ಚಾಲಕನಾಗಿದ್ದು, ಅನೇಕ ಕಡೆ ಓಡಾಡಿರುವ ಶಂಕೆ ಇದೆ. ಮನೆ ಪಕ್ಕದ ಸ್ಥಳೀಯ ಹೋಟೆಲ್ ಕೂಡ ಸೀಲ್‍ಡೌನ್ ಮಾಡಲಾಗಿದೆ. ಅಂದಹಾಗೆ ತೀರ್ಥಹಳ್ಳಿ ಪಟ್ಟಣದಲ್ಲಿ ಮೊದಲ ಪ್ರಕರಣವಾಗಿ ಇದು ದಾಖಲಾಗಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಶಿವಮೊಗ್ಗದ ಜಿ.ಎಸ್.ಕೆ.ಎಂ. ರಸ್ತೆಯಲ್ಲಿರುವ ಪಿ.ಡಬ್ಲೂ.ಡಿ ಕ್ವಾಟ್ರಸ್ ನಲ್ಲಿಯೂ ಓರ್ವ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಬಡಾವಣೆಯ ಒಂದು ರಸ್ತೆಯನಗನು ಸೀಲ್ ಡೌನ್ ಮಾಡಲಾಗಿದೆ. ಈತ ಕಳೆದೆರೆಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಆಗಮಿಸಿದ್ದ ಎಂದು ತಿಳಿದು ಬಂದಿದ್ದು, ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕಲೆ ಹಾಕುತ್ತಿದೆ.

Comments

Leave a Reply

Your email address will not be published. Required fields are marked *