ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಆತ್ಮಹತ್ಯೆ..!

– ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ, ಕೊಲೆ ಆರೋಪ

ನೆಲಮಂಗಲ: ಬೆಂಗಳೂರು ನಗರದಲ್ಲಿ ಟ್ರಾಫಿಕ್ ಕಾನ್‍ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಗೊಲ್ಲರಹಳ್ಳಿ ಗ್ರಾಮದಲ್ಲಿ ನಡೆದಿದೆ.

ನೇತ್ರಾವತಿ(27) ನೇಣಿಗೆ ಶರಣಾದ ಪೊಲೀಸ್ ಕಾನ್‍ಸ್ಟೇಬಲ್. ಇವರು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತವಿನಕೆರೆ ಗ್ರಾಮದವರು. ಪೀಣ್ಯ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್ ಎಂಬವರ ಜೊತೆ ಒಂದು ತಿಂಗಳ ಹಿಂದೆ ಮದುವೆ ಆಗಿತ್ತು. ಮೃತ ನೇತ್ರಾವತಿ ಕಾಮಾಕ್ಷಿ ಪಾಳ್ಯದ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಮದುವೆಯ ನಂತರ ಗೊಲ್ಲರಹಟ್ಟಿಯ ಬಳಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಾಗಿದ್ದರು. ಗಂಡ ಮನೆಯಲ್ಲಿ ಇರುವಾಗಲೇ ನೇತ್ರಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಸ್ಥಳ ಪರಿಶೀಲನೆ ಮಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಬಳಿಯೇ ರೌಡಿಶೀಟರ್ ಬರ್ಬರ ಹತ್ಯೆ

ಪತಿ, ಪತ್ನಿ ಇಬ್ಬರು ಪೊಲೀಸ್ ಇಲಾಖೆಯಲ್ಲಿಯೇ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಮೃತ ನೇತ್ರಾವತಿ ಮತ್ತು ಮಂಜುನಾಥ್ ಒಂದೇ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದು ನೇತ್ರಾವತಿ 3 ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದರೆ, ಮಂಜುನಾಥ್ 5 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಮನೆಯವರ ಒಪ್ಪಿಗೆಯ ಮೇರೆಗೆ ಒಂದು ತಿಂಗಳ ಹಿಂದೆ ಮದುವೆಯಾಗಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಇರಲಿಲ್ಲ, ನಮಗೆ ಧೈರ್ಯ ಹೇಳುತ್ತಿದ್ದಳು, ಕಷ್ಟದಲ್ಲಿ ಜೀವನ ಸಾಗಿಸಿ ಕೆಲಸ ಪಡೆದವಳು. ಇದು ಆತ್ಮಹತ್ಯೆ ಅಲ್ಲ ಕೊಲೆಯಾಗಿದ್ದು ಮಂಜುನಾಥ್ ಕುಡಿದು ಆಕೆಯೊಂದಿಗೆ ಗಲಾಟೆ ಮಾಡುತ್ತಿದ್ದನು. ಅವನೇ ಕೊಲೆ ಮಾಡಿದ್ದಾನೆ ಎಂದು ನೇತ್ರಾವತಿಯ ಪೋಷಕರು ಹಾಗೂ ಸಂಬಂಧಿಕ ಸುರೇಶ್ ಆರೋಪಿಸಿದ್ದಾರೆ.

ನೇಣಿಗೆ ಶರಣಾಗಿದ್ದ ಸಮಯದಲ್ಲಿ ನೇಣಿಗೆ ಬಳಸಿದ್ದ ಸೀರೆ ಕತ್ತರಿಸಿ ನೇತ್ರಾವತಿಯ ದೇಹವನ್ನು ಕೆಳಗೆ ಇಳಿಸಿದ್ದು, ಆ ಸಮಯದಲ್ಲಿ ಎಣ್ಣೆ ಬಾಟಲ್ ಪಕ್ಕದಲ್ಲಿ ಇಟ್ಟುಕೊಂಡು ಕುಡಿದ ಮತ್ತಿನಲ್ಲಿ ಮಂಜುನಾಥ್ ಇದ್ದನು, ಕುಡಿದ ಮತ್ತಿನಲ್ಲಿ ಕೆಳಗೆ ಇಳಿಸಲು ಸಾಧ್ಯವೇ? ನೇಣು ಹಾಕಿಕೊಂಡ ಸ್ಥಳದಲ್ಲಿ ಕುರ್ಚಿ ಕೆಳಗೆ ಬೀಳದ ಸ್ಥಿತಿಯಲ್ಲಿದೆ. ನೇತ್ರಾವತಿಯನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕ ಸುರೇಶ್ ಅವರ ದೂರಿನ ಮೇರೆಗೆ ಮಂಜುನಾಥ್‍ನನ್ನು ವಶಕ್ಕೆ ಪಡೆದಿರುವ ಮಾದನಾಯಕನಹಳ್ಳಿ ಸಿಪಿಐ ಮಂಜುನಾಥ್ ಹಾಗೂ ಪೊಲೀಸರ ತಂಡ ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *