– ರೈತರ ಪ್ರತಿಭಟನೆಗೆ ಬರೋಬ್ಬರಿ 1 ತಿಂಗಳು!
– ಕೊರೆವ ಚಳಿಯಲ್ಲಿ ಟ್ರ್ಯಾಕ್ಟರ್‍ಗಳೇ ಮನೆ
– ಅಡುಗೆಗೆ ದಾನದ ರೂಪದಲ್ಲಿ ರೇಷನ್
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಕಳೆದಿದ್ದು, ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಧಿಗೆ ಪ್ರತಿಭಟನೆ ನಡೆಸಲು ರೈತ ಮುಖಂಡರು ತಿರ್ಮಾನಿಸಿದ್ದಾರೆ.

ದೆಹಲಿ ಹರಿಯಾಣ ಹೆದ್ದಾರಿಯ ಸಿಂಘು ಗಡಿ, ಠಿಕ್ಕರಿ, ಘಾಜೀಪುರ್ ಸೇರಿದಂತೆ ಎಂಟು ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್ ನಿಂದ ಆರಂಭವಾದ ಹೋರಾಟದ ಕಿಚ್ಚು ಈಗ ಇಡೀ ದೇಶವನ್ನು ಆವರಿಸಿಕೊಂಡಿದ್ದು ಪ್ರತಿಭಟನೆಗೆ ಈಗ ಹರಿಯಾಣ, ಉತ್ತಾರಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ದೇಶದ್ಯಾಂತ ಎಲ್ಲ ರಾಜ್ಯಗಳಿಂದ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ.
ಸಿಂಹ ಸ್ವಪ್ನವಾಗಿ ಕಾಡುತ್ತಿರುವ ರೈತರ ಪ್ರತಿಭಟನೆ ನಿಯಂತ್ರಿಸುವ ಕೇಂದ್ರ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದಲ್ಲಿ ಐದು ಸಂಧಾನ ಸಭೆಗಳನ್ನು ರೈತ ಮುಖಂಡರ ಜೊತೆಗೆ ನಡೆಸಿದ್ದು ವಿಫಲವಾಗಿದೆ. ಗೃಹ ಸಚಿವ ಅಮಿತ್ ಶಾ ನಡೆಸಿದ ಮಾತುಕತೆ ಕೂಡ ವಿಫಲವಾಗಿದ್ದು ಏಳನೇ ಸಂಧಾನ ಸಭೆಗೆ ವೇದಿಕೆ ಸಿದ್ಧವಾಗುತ್ತಿದೆ.

ಹೊಸ ಕೃಷಿ ಕಾನೂನಗಳಲ್ಲಿ ಬದಲಾವಣೆ ಮಾಡಲು ಸಿದ್ಧ, ಎಪಿಎಂಸಿ ಉಳಿಸಿಕೊಳ್ಳುವ ಮತ್ತು ಬೆಂಬಲ ಬೆಲೆ ನೀಡುವ ಬಗ್ಗೆ ಲಿಖಿತ ಭರವಸೆ ನೀಡುವುದಾಗಿ ಸರ್ಕಾರ ಹೇಳಿದರೂ ರೈತ ಮುಖಂಡರು ಒಪ್ಪಿಕೊಂಡಿಲ್ಲ. ಹೊಸ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದು, ದಿನದಿಂದ ದಿನಕ್ಕೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದಾರೆ.
ಅನಿರ್ಧಿಷ್ಟಾವಧಿಗೆ ಪ್ರತಿಭಟನೆಗೆ ಸಿದ್ಧವಾಗಿ ಬಂದಿರುವ ರೈತ ಸಮೂಹ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ದಿಲ್ಲಿಯ ಕೊರೆಯುವ ಚಳಿಗೆ ಮೈವೊಡ್ಡಿ ನಿಂತಿರುವ ಅವರು ಸದ್ಯ ಟ್ರ್ಯಾಕ್ಟರ್‍ಗಳನ್ನೇ ತಾತ್ಕಾಲಿಕ ಮನೆ ಮಾಡಿಕೊಂಡಿದ್ದಾರೆ. ಅಲ್ಲದೇ ಪ್ರತಿಭಟನೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಕ್ಕಿದ್ದು ಅಡುಗೆ ತಯಾರಿಸಲು ರೇಷನ್ ದಾನದ ರೂಪದಲ್ಲಿ ಬರುತ್ತಿದೆ.

ದೊಡ್ಡ ಅಡುಗೆ ಕೋಣೆಗಳನ್ನು ನಿರ್ಮಿಸಿ ನಿತ್ಯ ಸಾವಿರಾರು ಅನ್ನದಾತರಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಹಲವು ವೈದ್ಯರು ಸ್ವಯಂಚಾಲಿತವಾಗಿ ಕ್ಲಿನಿಕ್ ಗಳನ್ನು ತೆರೆದು ಅನಾರೋಗ್ಯ ಪೀಡಿತ ರೈತರಿಗೆ ಚಿಕಿತ್ಸೆ ನೀಡುತ್ತಿದ್ದರೆ ಮತ್ತಷ್ಟು ದಾನಿಗಳು ರೈತರು ಕಾಲ್ ಮಸಾಜ್ ಮಾಡಿಕೊಳ್ಳಲು ಹಾಗೂ ಬಟ್ಟೆಗಳನ್ನು ತೊಳೆಯಲು ಯಂತ್ರಗಳನ್ನು ನೀಡಿದ್ದಾರೆ.
ಎಲ್ಲ ಗಡಿಯಲ್ಲೂ ಪ್ರತಿಭಟನೆ ಕಿಚ್ಚು ಹೆಚ್ಚಾಗುತ್ತಿದ್ದು, ದೆಹಲಿ ಸಂಪರ್ಕಿಸುವ ಎಲ್ಲ ಹೆದ್ದಾರಿಗಳು 15 ಕಿಲೋಮೀಟರ್ ಹೆಚ್ಚು ಉದ್ದ ಜಾಮ್ ಆಗಿದೆ. ಪ್ರಕರಣ ವಿಕೋಪಕ್ಕೆ ತೆರಳುತ್ತಿದ್ದಂತೆ ಸುಪ್ರೀಂಕೋರ್ಟ್ ಈಗ ಮಧ್ಯಸ್ಥಿಕೆ ವಹಿಸಿದೆ. ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು ಎಂದಿರುವ ನ್ಯಾ.ಎಸ್.ಎ ಬೋಬ್ಡೆ ನೇತೃತ್ವದ ಪೀಠ ಜನರಿಗೆ ತೊಂದರೆಯಾಗಂತೆ ಪ್ರತಿಭಟನೆ ನಡೆಸಿ ಎಂದಿದೆ. ಅಲ್ಲದೆ ಇಂದೊಂದು ರಾಷ್ಟ್ರೀಯ ವಿಚಾರ ಆಗಿರುವ ಕಾರಣ ಪ್ರಕರಣದ ಇತ್ಯರ್ಥಕ್ಕೆ ಸಮಿತಿ ರಚನೆ ಮಾಡುವುದಾಗಿ ಹೇಳಿದೆ.

ಅನ್ನದಾತರ ಹೋರಾಟದ ಕಿಚ್ಚು ಹೆಚ್ಚಾಗುತ್ತಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಅಖಾಡಕ್ಕೆ ಇಳಿದಿದ್ದಾರೆ. ರೈತರ ಮನವೊಲಿಸುವ ಕಾರ್ಯ ಮಾಡುತ್ತಿದ್ದು ವಿಫಲವಾಗಿದ್ದಾರೆ. ಈವರೆಗೂ ಮೂರು ಬಾರಿ ರೈತರನ್ನು ಉದ್ದೇಶಿಸಿ ಮೋದಿ ಸಾರ್ವಜನಿಕ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಕೃಷಿ ಕಾನೂನುಗಳನ್ನು ಸರ್ಮರ್ಥಿಸಿಕೊಂಡಿರುವ ಅವರು ಹೊಸ ಕಾನೂನು ರೈತ ಜೀವನದಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದಿದ್ದಾರೆ. ವಿಪಕ್ಷಗಳ ಷಡ್ಯಂತ್ರಗಳಿಗೆ ಬಲಿಯಾಗದೇ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಆದರೆ ರೈತರು ಮಾತ್ರ ಸರ್ಕಾರದ ಮಾತನ್ನು ಈವರೆಗೂ ಕೇಳಿಲ್ಲ ಸದ್ಯ ಒಂದು ತಿಂಗಳು ಪೂರೈಸಿದ್ದು ಕಾನೂನು ವಾಪಸ್ ಪಡೆಯುವವರೆಗೂ ಪ್ರತಿಭಟನೆ ನಿರಂತರ ಎಂದಿದ್ದಾರೆ. ಹೀಗಾಗಿ ಕ್ರಿಸ್ಮಸ್ ರಜೆ ಬಳಿಕ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಇತ್ಯರ್ಥ ಮಾಡುವ ಸಾಧ್ಯತೆಗಳಿದ್ದು ಮುಂದೆ ಪ್ರತಿಭಟನೆ ಯಾವ ದಿಕ್ಕಿಗೆ ತಿರುಗಲಿದೆ ಕಾದು ನೋಡಬೇಕಿದೆ.


Leave a Reply