ತಾಯಿಯಿಂದ ವಾಟ್ಸಪ್ ಸ್ಟೇಟಸ್ ಅಪ್ಡೇಟ್ – ಮಗ ಅರೆಸ್ಟ್

ಹೈದರಾಬಾದ್: ನೆರೆಮನೆಯ ಬೀಗ ಒಡೆದು ಚಿನ್ನದ ಆಭರಣಗಳನ್ನು ಖದ್ದಿದ್ದ ಕಳ್ಳನೊಬ್ಬ 15 ತಿಂಗಳ ನಂತರ ತಾಯಿಯ ವಾಟ್ಸಪ್ ಸ್ಟೇಟಸ್ ಮೂಲಕ ಸಿಕ್ಕಿಬಿದ್ದಿರುವ ಘಟನೆ ಹೈದರಾಬಾದ್‍ನ ಸಾಯಿಪುರಿ ಕಾಲೋನಿಯಲ್ಲಿ ನಡೆದಿದೆ.

ಹೈದರಾಬಾದ್‍ನ ರಾಚಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಸಾಯಿಪುರಿ ಕಾಲೋನಿಯಲ್ಲಿ 2019ರ ಜುಲೈ 12 ರಂದು ರವಿಕಿರಣ್ ಎಂಬವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.

ಬೆಳಕಿಗೆ ಬಂದಿದ್ದು ಹೇಗೆ?
ರವಿಕಿರಣ್ ಅವರ ನೆರೆಮನೆಯಲ್ಲಿ ವಾಸವಾಗಿದ್ದ ಮಹಿಳೆ ಚಿನ್ನಾಭರಣ ಧರಿಸಿ ವಾಟ್ಸಪ್ ಸ್ಟೇಟಸ್‍ನಲ್ಲಿ ತನ್ನ ಫೋಟೋ ಹಾಕಿಕೊಂಡಿದ್ದಳು. ಇದನ್ನ ನೋಡಿದ ರವಿಕಿರಣ್ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ವಿಚಾರಣೆ ಮಾಡಿದಾಗ ನೆರೆಮನೆಯ ಆ ಮಹಿಳೆಯ ಮಗ ಜಿತೇಂದರ್ 15 ತಿಂಗಳ ಹಿಂದೆ ಆಭರಣ ಕದ್ದ ವಿಚಾರ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?
2019ರ ಜುಲೈ 12 ರಂದು ರವಿಕಿರಣ್ ಮನೆಯವರು ದೇವಸ್ಥಾನಕ್ಕೆ ಹೋಗಿ ಮರಳಿ ಬಂದಾಗ ಬಾಗಿಲು ತೆರೆದುಕೊಂಡಿತ್ತು. ಬಹುಶ: ನಾನೇ ಬೀಗ ಹಾಕುವುದನ್ನು ಮರೆತಿರಬಹುದು ಎಂದುಕೊಂಡು ರವಿಕಿರಣ್ ಮನೆ ಪ್ರವೇಶಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾದರೂ ಆರೋಪಿ ಸಿಕ್ಕಿ ಬಿದ್ದಿರಲಿಲ್ಲ.

ಈಗ ಆರೋಪಿ ಜಿತೇಂದರ್‍ನನ್ನು ಅರೆಸ್ಟ್ ಮಾಡಲಾಗಿದ್ದು, ಕೃತ್ಯದ ಬಗ್ಗೆ ತಿಳಿದಿದ್ದರೂ ವಿಷಯ ಮುಚ್ಚಿಟ್ಟಿದ್ದ ತಾಯಿಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *