ತಾಯಿಯ ನೆನಪಿಗಾಗಿ 1 ಲಕ್ಷ ಖರ್ಚು ಮಾಡಿ ಇಡೀ ಪಟ್ಟಣಕ್ಕೆ ಸ್ಯಾನಿಟೈಸರ್ ಸಿಂಪಡಣೆ

– ಬಡವರಿಗೆ 10 ರೂಪಾಯಿಗೆ ಊಟ ನೀಡಲು ‘ಅಮ್ಮ ಕ್ಯಾಂಟೀನ್’ ಪ್ರಾರಂಭ

ಯಾದಗಿರಿ: ಜಿಲ್ಲೆಯಲ್ಲಿ ಮಗನೊಬ್ಬ ತನ್ನ ತಾಯಿಯ ನೆನಪಿಗಾಗಿ ಸ್ವಂತ ಖರ್ಚಿನಲ್ಲಿ ಇಡೀ ಪಟ್ಟಣಕ್ಕೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿದ್ದಾರೆ.

ಜಿಲ್ಲೆ ಈಗ ಕೊರೊನಾ ಹಾಟಸ್ಪಾಟ್ ಆಗಿದೆ. ಬರೋಬ್ಬರಿ ನಾಲ್ಕು ದಿನಗಳಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ. ಇದರಿಂದಾಗಿ ಜಿಲ್ಲೆಯ ಜನ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಈ ವೇಳೆ ಜಿಲ್ಲೆಯ ಶಹಪುರದ ವ್ಯಕ್ತಿಯೊಬ್ಬ ಕೊರೊನಾ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ.

ಪಟ್ಟಣದ ಗುರು ಮಣಿಕಂಠ ಸ್ವಯಂ ಪ್ರೇರಿತವಾಗಿ ತನ್ನ ಸ್ವಂತ ಖರ್ಚಿನಲ್ಲಿ ಶಹಪುರ ಸಂಪೂರ್ಣ ನಗರಕ್ಕೆ ಸ್ಯಾನಿಟೈಸ್ ಮಾಡಿಸುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಮಣಿಕಂಠ ತಮ್ಮ ಅಮ್ಮನ 36 ಪುಣ್ಯಸ್ಮರಣೆ ಅಂಗವಾಗಿ ಸುಮಾರು ಒಂದು ಲಕ್ಷ ಹಣ ವೆಚ್ಚ ಮಾಡಿ ಸಂಪೂರ್ಣ ಶಹಪುರ ನಗರಕ್ಕೆ ಎರಡು ಟ್ರಾಕ್ಟರ್‌ಗಳ ಮೂಲಕ ಸಾನಿಟೈಸರ್ ಮಾಡಿಸಿದ್ದಾರೆ.

ಅಲ್ಲದೇ ಶಹಪುರದಲ್ಲಿ ತಮ್ಮ ತಾಯಿಯ ನೆನಪಿನಲ್ಲಿ ಬಡ ವರ್ಗದ ಜನರಿಗೆ 10 ರೂಪಾಯಿಗೆ ಹೊಟ್ಟೆ ತುಂಬ ಊಟ ನೀಡುವ ನಿಟ್ಟಿನಲ್ಲಿ ‘ಅಮ್ಮ ಕ್ಯಾಂಟೀನ್ ‘ ಸಹ ಆರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಮ್ಮನ ನೆನಪಿಗಾಗಿ ಜಿಲ್ಲೆಯಲ್ಲಿ ಮೊಟ್ಟ ಮೊದಲಿಗೆ ‘ಅಮ್ಮ ಕ್ಯಾಂಟೀನ್’ ತೆಗೆದು ಬಡವರ ಹಸಿವು ನೀಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಇದೀಗ ಜಿಲ್ಲೆಯಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಖರ್ಚು ಮಾಡಿ ಔಷಧಿ ಸಿಂಪಡಣೆ ಮಾಡಿಸಿದ್ದಾರೆ. ಯಾವುದೇ ಲಾಭ ಪಡೆಯದೆ ತಮ್ಮ ಅಮ್ಮನ ನೆನಪಿನಲ್ಲಿ ಗುರು ಮಣಿಕಂಠ ಅವರು ಸಾಮಾಜಿಕ ಕಾಳಜಿ ತೋರುತ್ತಿರುವುಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *