ತಾತನ ಹೆಸರೇಳಿ ಎಂಪಿ ಆದವರಿಗೆ ಬೇರೆ ಕ್ಷೇತ್ರದಲ್ಲಿ ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ: ಪ್ರೀತಂಗೌಡ

ಹಾಸನ: ತಾತನ ಹೆಸರು ಹೇಳಿ ಸಂಸದರಾದಗಿದ್ದಾರೆ. ಬೇರೆ ಕ್ಷೇತ್ರದಲ್ಲಿ ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ ಎಂದು ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿನ ಬಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಪ್ರೀತಂಗೌಡ, ಇವರಿಗೆ ವೋಟ್ ಹಾಕಿ ಬೇಸರವಾಗಿ ಜನ ನಂಬಿಕಸ್ಥರನ್ನ ಹುಡುಕುತ್ತಿದ್ದರು. ಬಿಜೆಪಿ ಮೇಲೆ ನಂಬಿಕೆ ಬಂದು ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಶಿರಾ ಹೋರಾಟ ವಿಜಯೇಂದ್ರ ನೇತೃತ್ವ ಸೇರಿದಂತೆ ಹಲವರ ಒಗ್ಗಟ್ಟಿನ ಫಲ ಎಂದು ಹೇಳಿದರು.

ಹಾಸನ ನಾಯಕರೆಲ್ಲ ಬಂದು ಶಿರಾ ನಮ್ಮದೇ ಕ್ಷೇತ್ರ ಎಂದು ಪ್ರಚಾರ ಮಾಡಿದರು. ಪ್ರೀತಂಗೌಡ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಶಿರಾದಲ್ಲಿ ಕುಳಿತಿದ್ದಾರೆ ಎಂದು ಟೀಕೆ ಮಾಡಿದರು. ಮಾರನೇ ದಿನವೇ ಮನೆಮಕ್ಕಳೆಲ್ಲ ಬಂದು ಶಿರಾದಲ್ಲೇ ಕುಳಿತಿದ್ದರು. ಪಾಪ ನಮ್ಮ ಯುವ ನಾಯಕರು ಯಾವ ಹೋಬಳಿ ಜವಾಬ್ದಾರಿ ತಗೊಂಡಿದ್ರು ಅದರಲ್ಲಿ ಮೂರನೇ ಸ್ಥಾನ ಪಡೆದರು. ಮುಂಬರುವ ದಿನಗಳಲ್ಲಿ ರಾಜಕಾರಣದಲ್ಲಿ ಹೆಚ್ಚು ಶಕ್ತಿ ಬೆಳೆಸಿಕೊಳ್ಳುವ ಬುದ್ಧಿ ಕೊಡಲಿ. ತಾತನ ಹೆಸರೇಳಿಕೊಂಡು ಎಂಪಿ ಆಗಿದ್ದಾರೆ. ಆದರೆ ಬೇರೆ ಕ್ಷೇತ್ರದಲ್ಲಿ ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ. ಕಥೆ ಹೇಳಿದ್ರೆ ಜನ ಮತ ಹಾಕಲ್ಲ ಎಂದು ಪ್ರೀತಂಗೌಡ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.

ಇದೇ ವೇಳೆ ಮಂತ್ರಿಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನ ಹಾಸನದ ಮುಖ್ಯಮಂತ್ರಿ ರೀತಿ ಎಲ್ಲ ಅಭಿವೃದ್ಧಿ ಕೆಲಸ ಮಾಡಿಕೊಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ನಿರೀಕ್ಷೆ ಮಾಡಲ್ಲ. ನನಗೆ ಅಧಿಕಾರ ಕೊಡುವುದು ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಇನ್ನು ಹಾಸನದ ತಮ್ಮ ನಿವಾಸದ ಮುಂದೆ ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ, ಚೆನ್ನಾಗಿರುವ ರಸ್ತೆ ಕಿತ್ತು ಹಣ ಮಾಡಲು ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ರು. ಈ ಬಗ್ಗೆ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ, ರಾಜಕೀಯವಾಗಿ ಭಿನ್ನಾಭಿಪ್ರಾಯ ಇದ್ದರೂ ಎಂಪಿ ಅವರ ಮೇಲೆ ನನ್ನ ಕಾಳಜಿ ಇದೆ. ಸಂಸದರು ಯಾವುದೇ ಗುಂಡಿ ಇರುವ ರಸ್ತೆಯಲ್ಲಿ ಓಡಾಡಬಾರದು ಎಂದು ಮೊದಲನೆಯದಾಗಿ ಅವರ ಮನೆ ಮುಂದೆ ಗುಂಡಿ ಮುಚ್ಚಿದ್ದೇವೆ. ಚೆನ್ನಾಗಿರುವ ರಸ್ತೆಯನ್ನು ಒಡೆದು ಕೆಲಸ ಮಾಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು. ಅವರ ಮನೆಯ ಮುಂದಿನ ರಸ್ತೆ ಸರಿಯಾದರೆ ಅವರು ಖುಷಿ ಪಡಬೇಕು. ಇದರಲ್ಲಿ ಆತಂಕ ಪಡುವಂಥದ್ದು ಏನಿದೆ ಎಂದು ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *