ತಾಕತ್ತು ಇದ್ರೆ ಸರ್ಕಾರ ಬೀಳಿಸಿ – ಸಿಎಂ ಠಾಕ್ರೆ ಓಪನ್ ಚಾಲೆಂಜ್

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ವಿರೋಧಿಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ. ನಿಮಗೆ ತಾಕತ್ತು ಇದ್ರೆ ನಮ್ಮ ಸರ್ಕಾರ ಬೀಳಿಸಿ ನೋಡಿ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಆದಾಗಿನಿಂದಲೂ ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಅಘಾಡಿ ಸರ್ಕಾರ (ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ) ಬೀಳುತ್ತೆ ಎಂದು ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಅಂತ ಠಾಕ್ರೆ ಗುಡುಗಿದರು.

ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಒಂದು ವರ್ಷವಾಯ್ತು. ಅಂದಿನಿಂದ ಇಂದಿನವರೆಗೂ ಕೆಲವರು ಸರ್ಕಾರ ಪತನವಾಗುತ್ತೆ ಅಂತ ಹೇಳುತ್ತಿದ್ದಾರೆ. ನಿಮಗೆ ತಾಕತ್ತು ಇದ್ರೆ ನಮ್ಮ ಸರ್ಕಾರ ಬೀಳಿಸಿ ಎಂದು ನಾನು ನಿಮಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ. ಕೆಲವರು ರಾಜ್ಯದಲ್ಲಿ ದೇವಸ್ಥಾನಗಳನ್ನು ತೆಗೆಯದಿರುವುದಕ್ಕೆ ಬಾಳಾ ಠಾಕ್ರೆ ಮತ್ತು ನನ್ನ ಹಿಂದುತ್ವ ಬೇರೆ ಎಂದು ಹೇಳುತ್ತಿದ್ದಾರೆ. ನಿಮ್ಮ ಹಿಂದುತ್ವ ಅಂದ್ರೆ ಗಂಟೆ ಬಾರಿಸುವುದು ಮತ್ತು ಭಜನೆ ಮಾಡೋದು ಎಂದರ್ಥ. ನಾವು ಇಷ್ಟು ಚಿಕ್ಕದಾಗಿ ಹಿಂದುತ್ವ ವ್ಯಾಖ್ಯಾನ ಮಾಡಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿಗೆ ಹೆಸರು ಹೇಳದೇ ತಿರುಗೇಟು ನೀಡಿದರು.

ನೀವು ಬಿಹಾರದಲ್ಲಿ ಮಾತ್ರ ಉಚಿತ ಕೊರೊನಾ ವ್ಯಾಕ್ಸಿನ್ ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳುತ್ತಿದ್ದೀರಿ. ಹಾಗಾದ್ರೆ ಉಳಿದ ರಾಜ್ಯಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿವೆ ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಮಾತನಾಡಿದ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮಾತನಾಡಿ, ನಮ್ಮ ಅಘಾಡಿ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ. ಮುಂದಿನ 25 ವರ್ಷ ನಾವು ಆಡಳಿತದಲ್ಲಿರುವಂತೆ ನಮ್ಮ ಅಭಿವೃದ್ಧಿ ಕೆಲಸಗಳು ಮಾಡುತ್ತವೆ. ಹಿಂದಿನ ವರ್ಷ ನಾನು ಶಿವಸೇನೆಯಿಂದ ಸಿಎಂ ಆಗುತ್ತಾರೆ ಅಂತ ಹೇಳಿದ್ದೆ. ಇದೀಗ ಉದ್ಧವ್ ಠಾಕ್ರೆ ಸಿಎಂ ಆಗಿ ಒಂದು ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *