ತವರಿನ ಹುಲಿ ಅಶ್ವಿನ್ ದಾಳಿಗೆ ಇಂಗ್ಲೆಂಡ್ ತತ್ತರ – ಭಾರತಕ್ಕೆ 195 ರನ್ ಮುನ್ನಡೆ

ಚೆನ್ನೈ: ತವರಿನ ಹುಲಿ ಅಶ್ವಿನ್ ಅವರ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 134 ರನ್‍ಗಳಿಗೆ ಆಲೌಟ್ ಆಗಿದ್ದು, ಭಾರತ 195 ರನ್‍ಗಳ ಮುನ್ನಡೆ ಪಡೆದುಕೊಂಡಿದೆ. ಒಂದೇ ದಿನ ಭಾರತ ಹಾಗೂ ಇಂಗ್ಲೆಂಡ್‍ನ 14 ವಿಕೆಟ್ ಪತನಗೊಂಡಿದ್ದು ಪಂದ್ಯ ಕುತೂಹಲದತ್ತ ಸಾಗಿದೆ.

ಮೊದಲದಿನದಾಟದಲ್ಲಿ 300 ರನ್‍ಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ 95.5 ಓವರ್‍ ಗಳಿಗೆ 329 ರನ್‍ಗೆ ಸರ್ವಪತನ ಕಂಡಿತು. ನಂತರ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಯ ಮುಂದೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ 59.5 ಓವರ್‍ ಗಳಲ್ಲಿ ಆಲೌಟ್ ಆಯ್ತು.

ಇಂಗ್ಲೆಂಡ್ ಪರ ಬೆನ್ ಫೋಕ್ಸ್ ಔಟಾಗದೇ 42 ರನ್(107 ಎಸೆತ, 4 ಬೌಂಡರಿ)ಸಿಡಿಸಿ ಭಾರತದ ಬೌಲರ್‍ ಗಳನ್ನು ಕಾಡಿದನ್ನು ಹೊರತು ಪಡಿಸಿ ಉಳಿದ ಯಾವ ಬ್ಯಾಟ್ಸ್‌ಮ್ಯಾನ್ ಗಳು ಕ್ರೀಸ್‍ನಲ್ಲಿ ನೆಲೆಯೂರುವ ಪ್ರಯತ್ನ ಮಾಡಲಿಲ್ಲ.

ಭಾರತದ ಪರ ಭರ್ಜರಿ ದಾಳಿ ಸಂಘಟಿಸಿದ ಆರ್ ಅಶ್ವಿನ್ 5 ವಿಕೆಟ್ ಕಿತ್ತು ಮಿಂಚಿದರು. ಅಕ್ಷರ್ ಪಟೇಲ್ ಮತ್ತು ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದರು.

ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತಪರ 2ನೇ ದಿನದಾಟದಲ್ಲಿ ರಿಷಬ್ ಪಂತ್ 58 ರನ್(77 ಬಾಲ್, 7 ಬೌಂಡರಿ, 3 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಬಾಲಂಗೋಚಿ ಬ್ಯಾಟ್ಸ್‌ಮ್ಯಾನ್ ಗಳು ಯಾರು ಸಾಥ್ ಕೊಡದ ಹಿನ್ನೆಲೆ ಭಾರತ ಅಂತಿಮವಾಗಿ 329 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.

Comments

Leave a Reply

Your email address will not be published. Required fields are marked *