ತವರಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರಿದ್ದ ಬಸ್ ಪಲ್ಟಿ, ಮೂವರು ಸಾವು

ಭೋಪಾಲ್: ಕೊರೊನಾ ಲಾಕ್‍ಡೌನ್‍ನಿಂದಾಗಿ ತಮ್ಮ ಊರುಗಳತ್ತ ವಲಸೆ ಹೋಗುತ್ತಿದ್ದ ಕಾರ್ಮಿಕರ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರಿನ ಝೋರಾಸಿ ಘಾಟ್‍ನಲ್ಲಿ ಇಂದು ನಡೆದಿದೆ.

ದೆಹಲಿಯಿಂದ ಮಧ್ಯಪ್ರದೇಶದ ಟಿಕ್ಮಘರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿದೆ. ಬಸ್‍ನಲ್ಲಿ 100 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಪಘಾತವು ರಸ್ತೆ ತಿರುವಿನಲ್ಲಿ ಸಂಭವಿಸಿದೆ. ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಕಷ್ಟವಾಗಿದೆ. ಹೀಗಾಗಿ ಬಸ್ ಕೆಳಮುಖವಾಗಿ ಬಿದ್ದಿದೆ. ಬಸ್‍ನ ಚಾಲಕ ಪರಾರಿಯಾಗಿದ್ದಾನೆ. ಆತ ಕುಡಿದಿದ್ದಾನೆ ಎಂಬ ಆರೋಪ ಬಂದಿದೆ ಎಂದು ಭಿಲೋವ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅನಿಲ್ ಸಿಂಗ್ ಭಡೋರಿಯಾ ಹೇಳಿದ್ದಾರೆ.

ಬಸ್ ಪಲ್ಟಿಯಾಗುತ್ತಿದ್ದಂತೆ ಕೆಲವರು ರಸ್ತೆ ಮೇಲೆ ಹಾರಿದ್ದಾರೆ. ಕೆಲವರು ಕಿಟಕಿ ಗಾಜುಗಳನ್ನು ಒಡೆದುಕೊಂಡು ಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಸಾವಿರಾರು ಮಂದಿ ವಲಸೆ ಕಾರ್ಮಿಕರು ಕೂಲಿ ಕೆಲಸದ ಮಾಡುತ್ತಾ ನವದೆಹಲಿಯಲ್ಲಿ ನೆಲೆಸಿದ್ದಾರೆ. ಕೋವಿಡ್ ಸೋಂಕು ಇರುವ ಕಾರಣದಿಂದಾಗಿ ಒಂದುವಾರ ಲಾಕ್‍ಡೌನ್ ಮಾಡಲಾಗಿದೆ. ಕೊರೊನಾ ಹೆಚ್ಚಳವಾದರೆ ಸಂಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಮಾಡಬಹುದು ಎಂದು ವಲಸೆ ಕಾರ್ಮಿಕರು ತಮ್ಮ ತವರೂರಿನತ್ತ ಮುಖಮಾಡಿದ್ದಾರೆ.

Comments

Leave a Reply

Your email address will not be published. Required fields are marked *