ತಲೆಭಾಗಕ್ಕೆ ಬಲವಾದ ಪೆಟ್ಟು – ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದೇಗೆ?

– ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸಂಚಾರಿ ವಿಜಯ್

ಬೆಂಗಳೂರು: ಚಂದನವನದ ರಾಷ್ಟ್ರಪ್ರಶಸ್ತಿ ವಿಜೇಯ ಸಂಚಾರಿ ವಿಜಯ್ ಬೈಕ್ ಅಪಘಾತಗೊಂಡಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶನಿವಾರ ರಾತ್ರಿ ಜೆಪಿ ನಗರದ 7ನೇ ಹಂತದಲ್ಲಿ ಅಪಘಾತ ನಡೆದಿದೆ. ಬೈಕ್ ಸವಾರ ನವೀನ್ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಸಂಚಾರಿ ವಿಜಯ್ ಸೋದರ ಜೆ.ಪಿ.ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕ್ ನಲ್ಲಿ ಹಿಂದಿರುಗಿತ್ತಿದ್ದರು. ಬೈಕ್ ಗೆಳೆಯ ನವೀನ್ ಓಡಿಸುತ್ತಿದ್ದರು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿದ್ದರಿಂದ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೈಕ್ ವೇಗವಾಗಿದ್ದರಿಂದ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡ ನಟ ಸಂಚಾರಿ ವಿಜಯ್

ವಿಜಯ್ ಬಲ ತೊಡೆ ಭಾಗ ಮುರಿದಿದ್ದು, ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ತಲೆಗೆ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದರಿಂದ ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎನ್ನಲಾಗಿದೆ. ಮೆದುಳಿನ ರಕ್ತಸ್ತ್ರಾವ ತಡೆಗೆ ಸರ್ಜರಿ ನಡೆದಿದೆ ಎನ್ನಲಾಗಿದೆ. ಡಾ ವೆಂಕಟೇಶ್ ಹಾಗೂ ಡಾ ಅನಿಲ್ ಕುಮಾರ್ ಟೀಂ ಸಂಚಾರಿ ವಿಜಯ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯದ ಮಾಹಿತಿ ನೀಡಲು ಆಸ್ಪತ್ರೆ 48 ಗಂಟೆ ಸಮಯ ಕೇಳಿದೆ. ಸದ್ಯ ಐಸಿಯುನಲ್ಲಿರುವ ವಿಜಯ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಇನ್ನು ಅಪಘಾತದ ವಿಷಯ ತಿಳಿಯುತ್ತಿದ್ದಂತೆ ನಟ ನೀನಾಸಂ ಸತೀಶ್ ಆಸ್ಪತ್ರೆಗೆ ಆಗಮಿಸಿ ವೈದ್ಯರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ವಿಜಯ್ ಕುಟುಂಬಸ್ಥರಿಗೆ ನೀನಾಸಂ ಸತೀಶ್ ಧೈರ್ಯ ಹೇಳುವ ಕೆಲಸ ಮಾಡುತ್ತಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದರಾಗಿರುವ ಸಂಚಾರಿ ವಿಜಯ್, ನಾನು ಅವನಲ್ಲ, ಅವಳಲ್ಲ ಸಿನಿಮಾ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಸಿನಿಮಾ ಜೊತೆಯಲ್ಲಿ ‘ಉಸಿರು’ ಹೆಸರಿನ ತಂಡವನ್ನು ಕಟ್ಟಿಕೊಂಡು ಲಾಕ್‍ಡೌನ್ ನಲ್ಲಿ ಸಂಕಷ್ಟ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದರು.

Comments

Leave a Reply

Your email address will not be published. Required fields are marked *