ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ: ವಿಚಾರಣೆ ಬಳಿಕ ಅನುಶ್ರೀ ಸ್ಪಷ್ಟನೆ

ಮಂಗಳೂರು: ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯವಿತ್ತು. ತರುಣ್ ರಾಜ್ ನನಗೆ 6 ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ಅವರ ಪರಿಚಯವಾಗಿದೆ ಎಂದು ನಿರೂಪಕಿ ಅನುಶ್ರೀ ಹೇಳಿದರು.

ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಈ ವಿಚಾರಣೆ ನಡೆದಿದ್ದು, ಮೂರೂವರೆ ಗಂಟೆಗಳ ಸತತವಾಗಿ ನಡೆದ ವಿಚಾರಣೆ ಮುಕ್ತಾಯವಾಗಿದೆ. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನುಶ್ರೀ, ಮೊನ್ನೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದರು. ಇಂದು ವಿಚಾರಣೆಗೆ ಬಂದು ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ.

ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ. ತರುಣ್ ರಾಜ್ ನನಗೆ 6 ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ತರುಣ್ ರಾಜ್ ಪರಿಚಯವಾಗಿದೆ. ಡ್ರಗ್ಸ್ ಬಗ್ಗೆ ತರಣ್ ಜೊತೆ ಯಾವುದೇ ಸಂಬಂಧ ಇಲ್ಲ. ಅವರ ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ಮಾಡಿಕೊಟ್ಟಿದ್ದೆ. ಅದು ಬಿಟ್ಟರೆ ಅವರ ಪರಿಚಯ ನನಗೆ ಅಷ್ಟೇನೂ ಇಲ್ಲ ಎಂದರು.

ಅವರ ಪರಿಚಯ ಇದ್ದ ಕಾರಣ ನನ್ನನ್ನು ವಿಚಾರಣೆಗೆ ಕರೆಸಿದ್ದರು. ಪೊಲೀಸರು ಇವತ್ತು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಇವತ್ತು ಮುಂದಿನ ವಿಚಾರಣೆ ಬಗ್ಗೆ ಪೊಲೀಸರು ಏನೂ ಹೇಳಿಲ್ಲ. ನಾನು ಅವರೊಟ್ಟಿಗೆ ಯಾವುದೇ ಪಾರ್ಟಿಯನ್ನು ಮಾಡಿಲ್ಲ ಎಂದು ಅನುಶ್ರೀ ಸ್ಪಷ್ಟ ಪಡಿಸಿದರು. ಡ್ರಗ್ಸ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೋಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದು ಇದೇ ವೇಳೆ ತಿಳಿಸಿದರು.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಪಣಂಬೂರು ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆಗೆ ಇಂದು ಹಾಜರಾಗಿದ್ದರು. ಶುಕ್ರವಾರವೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದರು. ಆದರೆ ಮಂಗಳೂರು ತಲುಪುತ್ತಿದ್ದಂತೆ ಅನುಶ್ರೀ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಪಣಂಬೂರು ಠಾಣೆಗೆ ತೆರಳಿ ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಪೊಲೀಸರ ವಿಚಾರಣೆ ಎದುರಿಸಿದರು.

ಈಗಾಗಲೇ ಬಂಧನವಾಗಿರುವ ಕಿಶೋರ್, ತರುಣ್, ನೌಶೀನ್ ಮಂಗಳೂರಿನ ಪಾಂಡೇಶ್ವರದಲ್ಲಿನ ಇಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಾಕಷ್ಟು ಮಾಹಿತಿ ಸಂಗ್ರಹಿಸಿದ ಪೊಲೀಸರು ಶುಕ್ರವಾರ ಸಂಜೆ ವೇಳೆಗೆ ಕಿಶೋರ್ ಹಾಗೂ ನೌಶೀನ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೋರ್ಟಿಗೆ ಹಾಜರುಪಡಿಸುವ ಮುನ್ನ ಆರೋಪಿಗಳಿಗೆ ಡ್ರಿಲ್ ಮಾಡಲಾಗಿದ್ದು, ಆರೋಪಿ ತರುಣ್ ಅನುಶ್ರೀ ಬಗೆಗಿನ ಮಹತ್ವದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *