ತಮ್ಮ ನಿವಾಸದ ಬಾತ್‍ರೂಮಿನಲ್ಲೇ ಖ್ಯಾತ ಫ್ಯಾಷನ್ ಡಿಸೈನರ್ ಮೃತದೇಹ ಪತ್ತೆ

– ವಿಶೇಷವಾಗಿ ಪುರುಷರ ಉಡುಪನ್ನು ತಯಾರಿಸುತ್ತಿದ್ರು

ಕೋಲ್ಕತ್ತಾ: ಖ್ಯಾತ ಫ್ಯಾಷನ್ ಡಿಸೈನರ್ ಶರ್ಬಾರಿ ದತ್ತಾ (63) ಮೃತದೇಹ ಅವರ ಮನೆಯಲ್ಲಿನ ಬಾತ್‍ರೂಮಿನಲ್ಲಿಯೇ ಪತ್ತೆಯಾಗಿದೆ.

ಕೋಲ್ಕತ್ತಾದ ಬೋರ್ಡ್ ಸ್ಟ್ರೀಟ್‍ನಲ್ಲಿರುವ ನಿವಾಸದ ಬಾತ್‍ರೂಮಿನಲ್ಲಿ ಶರ್ಬಾರಿ ದತ್ತಾ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12.25ಕ್ಕೆ ಪತ್ತೆಯಾಗಿದ್ದು, ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಮರಣೋತ್ತರ ವರದಿಯ ನಂತರವೇ ಶರ್ಬಾರಿ ದತ್ತಾ ಸಾವಿಗೆ ನಿಖರ ಕಾರಣ ತಿಳಿದು ಬರುತ್ತದೆ.

ಈ ಬಗ್ಗೆ ಮಾಹಿತಿ ಪಡೆದ ನಂತರ ಕೋಲ್ಕತಾ ಪೊಲೀಸರು ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ. ಶರ್ಬಾರಿ ದತ್ತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಯಾವುದೇ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ ಎಂದು ಶರ್ಬಾರಿ ದತ್ತಾ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಶರ್ಬಾರಿ ದತ್ತಾ ಬಂಗಾಳಿ ಕವಿ ಅಜಿತ್ ದತ್ತಾ ಅವರ ಪುತ್ರಿಯಾಗಿದ್ದು, ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದಿದ್ದರು. ನಂತರ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶರ್ಬಾರಿ ದತ್ತಾ ವಿದ್ಯಾರ್ಥಿಯಾಗಿದ್ದಾಗ ಅನೇಕ ನೃತ್ಯ, ನಾಟಕಗಳಲ್ಲಿ ಭಾಗವಹಿಸಿದ್ದರು. ಬಳಿಕ ದತ್ತಾ ಫ್ಯಾಷನ್ ಉದ್ಯಮದಲ್ಲಿ ಅದರಲ್ಲೂ ವಿಶೇಷವಾಗಿ ಪುರುಷರ ಉಡುಪುಗಳ ತಯಾರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು.

ದತ್ತಾ ಅವರು ಬಣ್ಣ ಬಣ್ಣದ ಬಂಗಾಳಿ ಧೋತಿಗಳು ಮತ್ತು ಡಿಸೈನರ್ ಪಂಜಾಬಿ ಕುರ್ತಾಗಳನ್ನು ಕಸೂತಿಯೊಂದಿಗೆ ತಯಾರಿಸುತ್ತಿದ್ದರು. ಇವರು ತಯಾರಿಸಿದ್ದ ಉಡುಪನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನೂ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಧರಿಸಿದ್ದರು.

ಶರ್ಬಾರಿ ದತ್ತಾ ನಿಧನದ ನಂತರ ಸೋಶಿಯಲ್ ಮೀಡಿಯಾದಲ್ಲಿ ಗಾಯಕರು, ನಟ-ನಟಿಯರು, ನಿರ್ದೇಶಕರು ಮತ್ತು ಅಭಿಮಾನಿಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *