ತಮಿಳುನಾಡು ಮಾತು ಕೇಳಿ ಮೇಕೆದಾಟು ಯೋಜನೆಗೆ ಅನುಮತಿ ವಿಳಂಬ ಮಾಡಲಾಗುತ್ತಿದೆಯೇ?- ಕೇಂದ್ರಕ್ಕೆ ಹೆಚ್‍ಡಿಕೆ ಪ್ರಶ್ನೆ

ಬೆಂಗಳೂರು: ಮೇಕೆದಾಟು ಯೋಜನೆಗೆ ಅನುಮತಿ ಕೊಡಲು ವಿಳಂಬ ನೀತಿ ಅನುಸರಿಸುತ್ತಿರೋ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಸರಣಿ ಟ್ವೀಟ್ ಮಾಡಿ ಕೇಂದ್ರದ ವಿರುದ್ದ ಆಕ್ರೋಶ ಹೊರ ಹಾಕಿರುವ ಅವರು, ತಮಿಳುನಾಡು ಮಾತು ಕೇಳಿ ಅನುಮತಿ ವಿಳಂಬ ಮಾಡಲಾಗುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮೇಕೆದಾಟು ಡ್ಯಾಂಗೆ ಅನುಮತಿ ನೀಡಬಾರದೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ಯೋಜನೆ ತಡೆಯಲು ಪ್ರಧಾನಿ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾಗಿ ಹೇಳಿದ್ದಾರೆ. ಕೇಂದ್ರವು ತಮಿಳುನಾಡಿನ ಒತ್ತಡಕ್ಕೆ ಮಣಿದು ಅನುಮತಿ ಮುಂದೂಡತ್ತಾ ಬಂದಿದ್ದೇ ಆದರೆ ಅದು ಕನ್ನಡಿಗರಿಗೆ ಬಗೆದ ದ್ರೋಹ. ಮೇಕೆದಾಟು ಯೋಜನೆ ಜಾರಿಗೆ ತಂದು ನನ್ನ ಸರ್ಕಾರ ಧೈರ್ಯ ಪ್ರದರ್ಶಿಸಿತ್ತು. ಪರಿಸರ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ವರೆಗೆ ಅನುಮತಿ ಸಿಕ್ಕಿಲ್ಲ. ಇತ್ತ ಯೋಜನೆ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗುತ್ತಾ ಬಂದವು. ಇದೆಲ್ಲ ಗಮನಿಸಿದರೆ ಯೋಜನೆ ತಡೆಯಲು ತಮಿಳುನಾಡು-ಕೇಂದ್ರ ಷಡ್ಯಂತ್ರ ಹೆಣೆದ ಅನುಮಾನ ಮೂಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಒತ್ತಡ ಹೇರಿತ್ತೇ? ಅದರ ಮಾತು ಕೇಳಿ ಅನುಮತಿ ವಿಳಂಬ ಮಾಡಲಾಯಿತೇ? ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು. ಇಲ್ಲವೇ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ‘ಭಾಷಾ ದುರಭಿಮಾನಿ ಬಿಜೆಪಿ ಸಂಸದರು’ ಪ್ರಶ್ನೆ ಮಾಡಿ ಉತ್ತರ ಪಡೆದುಕೊಂಡು ಬರಬೇಕು. ಇಲ್ಲವೇ ಬಾಕಿ ಇರುವ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *