ತಮಿಳುನಾಡಿನಲ್ಲಿ ಬಿರುಗಾಳಿ ಮಳೆ – 1 ಲಕ್ಷ ಮಂದಿ ಸ್ಥಳಾಂತರ

– ಇಂದು ಮಧ್ಯ ರಾತ್ರಿ ಅಪ್ಪಳಿಸಲಿದೆ ಸೈಕ್ಲೋನ್‌
–  ಐದಾರು ಮೀಟರ್ ಎತ್ತರಕ್ಕೆ  ಚಿಮ್ಮುತ್ತಿವೆ ಅಲೆಗಳು

ಚೆನ್ನೈ/ ಬೆಂಗಳೂರು: ಉಗ್ರ ಸ್ವರೂಪ ಪಡೆಯುತ್ತಿರುವ ನಿವಾರ್ ಚಂಡಮಾರುತ ತಮಿಳುನಾಡು-ಪುದುಚ್ಚೆರಿಯನ್ನು ತತ್ತರಿಸುವಂತೆ ಮಾಡಿದೆ. ಇಂದು ಮಧ್ಯರಾತ್ರಿ 2 ಗಂಟೆ ವೇಳೆಗೆ ತಮಿಳುನಾಡಿನ ಮಾಮಲ್ಲಪುರಂ ಮತ್ತು ಕರೈಕಲ್ ನಡುವಣ ತೀರಕ್ಕೆ ಚಂಡಮಾರುತ ಅಪ್ಪಳಿಸುವ ಸಂಭವ ಇದೆ.

ಸದ್ಯ ಕಡಲೂರಿನಿಂದ 180 ಕಿಲೋಮೀಟರ್ ದೂರದಲ್ಲಿ, ಪುದುಚ್ಚೆರಿಯಿಂದ 190 ಕಿಲೋಮೀಟರ್ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದ್ದು, ಗಂಟೆಗೆ 11 ಕಿಲೋಮೀಟರ್ ವೇಗದಲ್ಲಿ ತೀರದತ್ತ ಧಾವಿಸುತ್ತಿದೆ. ಈಗಾಗಲೇ ತೀರ ಪ್ರದೇಶದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಅರ್ಧರಾತ್ರಿ ಹೊತ್ತಿಗೆ ನಿವ‌‌ರ್  ಚಂಡಮಾರುತ ತೀರ ದಾಟಲಿದೆ. ಈ ಸಂದರ್ಭದಲ್ಲಿ ಚಂಡಮಾರುತದ ವೇಗ ಗಂಟೆಗೆ 120ರಿಂದ 145 ಕಿಲೋಮೀಟರ್‌ಗೆ ಏರಿಕೆ ಆಗಲಿದೆ. 6 ಗಂಟೆಗಳ ಕಾಲ ಚಂಡಮಾರುತದ ತೀವ್ರತೆ ಇರಲಿದೆ. ಇದರಿಂದ ಭಾರೀ ಅನಾಹುತಗಳು ಸಂಭವಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಈಗಾಗಲೇ ತಮಿಳುನಾಡು- ಪುದುಚ್ಚೇರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದೆ. ಐದಾರು ಮೀಟರ್ ಎತ್ತರಕ್ಕೆ ಅಲೆಗಳು ಚಿಮ್ಮುತ್ತಿವೆ. ಬಿರುಗಾಳಿಯ ರಭಸಕ್ಕೆ ಹೋರ್ಡಿಗ್ಸ್ ಕಿತ್ತು ಹೋಗಿ ಬೈಕ್ ಸವಾರನ ಮೇಲೆ ಬಿದ್ದಿದೆ.

ರಣಚಂಡಿ ಮಳೆಗೆ ಚೆನ್ನೈನ ತಗ್ಗು ಪ್ರದೇಶಗಳು ಜಲಮಯವಾಗಿವೆ. ಚೆನ್ನೈಗೆ ಕುಡಿಯುವ ನೀರು ಒದಗಿಸುವ ಚೆಂಬರಬಾಕ್ಕಂ ಕೆರೆ ತುಂಬಿ ಹರಿಯುತ್ತಿದೆ. ಚೆನ್ನೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ. 26 ವಿಮಾನಗಳ ಸಂಚಾರ ರದ್ದಾಗಿದೆ. 13ಕ್ಕೂ ಹೆಚ್ಚು ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ.

ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. 24 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳಿಸಲಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ ಆಗುವ ಕಾರಣ, ನಾಳೆ ಕೂಡ 13 ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಆಂಧ್ರದ ತಿರುಪತಿಯಲ್ಲಿಯೂ ಭಾರೀ ಮಳೆ ಆಗಿ ಭಕ್ತರು ಪರದಾಡಿದ್ದಾರೆ.

ಕರ್ನಾಟಕದಲ್ಲೂ ಮಳೆ:
ರಾಜ್ಯದ ಮೇಲೆಯೂ ನಿವರ್ ಸೈಕ್ಲೋನ್ ಎಫೆಕ್ಟ್ ಇರಲಿದೆ. ನಾಳೆಯವರೆಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *