ತಮಿಳಿನ ಹಾಸ್ಯನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ನಿಧನ

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ವಾಡಿವೆಲ್ ಬಾಲಾಜಿಯವರು ಟಿವಿಯಲ್ಲಿ ಮಿಮಿಕ್ರಿ ಮಾಡಿಕೊಂಡು ಹಿಟ್ ಆಗಿದ್ದರು. ಜೊತೆಗೆ ಹಲವಾರು ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನ ಹಿರಿಯ ಹಾಸ್ಯನಟ ವಡಿವೇಲು ಅವರ ಮಿಮಿಕ್ರಿ ಮಾಡಿಕೊಂಡೆ ಕಿರುತೆರೆಯಲ್ಲಿ ವಡಿವೇಲು ಬಾಲಾಜಿ ಎಂಬ ಪ್ರಸಿದ್ಧಿ ಪಡೆದದ್ದ 45 ವರ್ಷದ ನಟ ಹೃದಯಾಘಾದಿಂದ ನಿಧನರಾಗಿದ್ದಾರೆ.

ವಡಿವೆಲ್ ಬಾಲಜಿಯವರು ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊದಲಿಗೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬಾಲಾಜಿಯವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಆಗಲಿದ್ದಾರೆ.

ವಡಿವೆಲ್ ಬಾಲಾಜಿಯವರ ನಿಧನಕ್ಕೆ ಸಂತಾಪ ಸೂಚಿಸಿರುವ ನಟ ಧನುಷ್ ಅವರು, ವಡಿವೆಲ್ ಬಾಲಾಜಿಯವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಯ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಫ್ಯಾಮಿಲಿಗೆ ಅವರ ಸಾವನ್ನು ಭರಿಸುವ ಶಕ್ತಿ ಕೊಡಲಿ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ನಟ ಪ್ರಸನ್ನ, ನಟಿ ಐಶ್ವರ್ಯ ರಾಜೇಶ್ ಮತ್ತು ಚಿತ್ರ ವಿಮರ್ಶಕ ರಮೇಶ್ ಬಾಲ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

1975ರಲ್ಲಿ ತಮಿಳುನಾಡಿನ ಮಧುರೈನಲ್ಲಿ ಜನಿಸಿದ ವಡಿವೆಲ್ ಬಾಲಾಜಿ, 1991ರಲ್ಲಿ ಎನ್ ರಸಾವಿನ್ ಮನಸಿಲೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ರಾಜ್‍ಕಿರಣ್ ಮತ್ತು ಮೀನ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಟಿವಿ ಶೋಗಳಲ್ಲಿ ಮಿಮಿಕ್ರಿ ಮಾಡಿ ಬಾಲಾಜಿ ಹೆಚ್ಚು ಜನಪ್ರಿಯಗೊಂಡಿದ್ದರು. ನಂತರ 2018ರಲ್ಲಿ ನಯನತಾರ ಅಭಿನಯದ ಹಿಟ್ ಸಿನಿಮಾ ಕೋಲಮಾವು ಕೋಕಿಲಾದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು.

Comments

Leave a Reply

Your email address will not be published. Required fields are marked *