ತಮಿಳಿನ ಖ್ಯಾತ ನಟನ ಮನೆಗೆ ಬಾಂಬ್ ಇಟ್ಟಿರುವುದಾಗಿ ಪೊಲೀಸರಿಗೆ ಕರೆ

– 21 ವರ್ಷದ ಮಾನಸಿಕ ರೋಗಿಯ ವಶ, ಬಿಡುಗಡೆ

ಚೆನ್ನೈ: ತಮಿಳಿನ ಖ್ಯಾತ ನಟ ವಿಜಯ್ ಮನೆಗೆ ಹುಸಿಬಾಂಬ್ ಕರೆಯೊಂದು ಬಂದಿದೆ. ಶನಿವಾರ ಮಧ್ಯರಾತ್ರಿ ಪೊಲೀಸ್ ಕಂಟ್ರೋಲ್ ರೂಮ್‍ಗೆ ಈ ಕರೆ ಬಂದಿದ್ದು, ಚೆನ್ನೈನ ಸಾಲಿಗ್ರಾಮ್‍ನಲ್ಲಿರುವ ವಿಜಯ್ ಮನೆಗೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತ ಪೊಲೀಸರು ವಿಜಯ್ ಮನೆಗೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಹೋಗಿ ಎರಡು ಗಂಟೆಗಳ ಸತತ ಶೋಧ ನಡೆಸಿದ್ದಾರೆ. ಆದರೆ ಎಷ್ಟು ಹುಡುಕಿದರು ಬಾಂಬ್ ಪತ್ತೆಯಾಗಿಲ್ಲ. ಇದಾದ ಬಳಿಕ ಇದೊಂದು ಹುಸಿಬಾಂಬ್ ಕರೆ ಎಂದು ತಿಳಿದು ಪೊಲೀಸರು ಹಿಂದಿರುಗಿದ್ದಾರೆ.

ಪೊಲೀಸರು ಕಂಟ್ರೋಲ್‍ಗೆ ಬಂದ ಕರೆಯನ್ನು ಟ್ರೇಸ್ ಮಾಡಿದ್ದು, ಈ ಕರೆಯನ್ನು ವಿಲ್ಲುಪುರಂ ಜಿಲ್ಲಯ ಮರಕ್ಕನಂ ನಿವಾಸಿದ 21 ವರ್ಷದ ಮಾನಸಿಕ ಅಸ್ವಸ್ಥ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈತ ಇದೇ ರೀತಿ ಹಲವಾರು ಈ ರೀತಿಯ ಕರೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಯ ನಂತರ ಎಚ್ಚರಿಕೆ ನೀಡಿ ಮತ್ತೆ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮರಕ್ಕನಂ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್, ಈ ಹಿಂದೆಯೂ ಕೂಡ ಈತ ಈ ರೀತಿಯ ಬೆದರಿಕೆ ಕರೆಯನ್ನು ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಯಲಲಿತಾ, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಪುದುಚೇರಿ ರಾಜ್ಯಪಾಲ ಕಿರಣ್ ಬೇಡಿ ಅವರಿಗೆ ಇಂತಹ ಕರೆಗಳನ್ನು ಮಾಡಿದ್ದ. ಆತ 100ಗೆ ಕರೆ ಮಾಡುತ್ತಾನೆ, ಅನಾಮಧೇಯ ಬೆದರಿಕೆ ಹಾಕಿ ಕರೆಯನ್ನು ಕಟ್ ಮಾಡುತ್ತಾನೆ ಎಂದು ಹೇಳಿದ್ದಾರೆ.

ನಾವು ಈ ಕರೆ ಬಂದ ಕೂಡಲೇ ನಂಬರ್ ಆಧಾರದ ಮೇಲೆ ವಿಳಾಸವನ್ನು ಪತ್ತೆ ಹಚ್ಚಿ ಅವನ ಮನೆಗೆ ಬಂದೆವು. ಇಲ್ಲಿಗೆ ಬಂದು ಕೇಳಿದಾಗ ನಾನೇ ಕರೆ ಮಾಡಿದ್ದು ಎಂದು ಆತ ಒಪ್ಪಿಕೊಂಡಿದ್ದಾನೆ. ಆತನ ಬಳಿ ಮೊಬೈಲ್ ಇಲ್ಲ. ಆದರೆ ಮನೆಯವರ ಫೋನ್ ಅನ್ನು ಬಳಸಿ ಈ ರೀತಿ ಕರೆ ಮಾಡಿದ್ದಾನೆ. ನಾವು ಆತನನ್ನು ಠಾಣೆಗೆ ಕರೆತಂದು ನಂತರ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ಹದಿನೈದು ದಿನದ ಹಿಂದೆ ಟಾಲಿವುಡ್‍ನ ಸೂಪರ್ ಸ್ಟಾರ್ ರಜಿನಿಕಾಂತ್ ಮನೆಗೆ ಹುಸಿಬಾಂಬ್ ಕರೆಯೊಂದು ಬಂದಿತ್ತು. ಈ ಕರೆಯ ಜಾಡು ಹಿಡಿದ ಪೊಲೀಸರಿಗೆ ಎಂಟನೇ ತರಗತಿಯ ಬಾಲಕನಿಂದ ಕರೆ ಬಂದಿದೆ ಅನ್ನೋ ವಿಚಾರ ಗೊತ್ತಾಗಿತ್ತು. ಹುಸಿಬಾಂಬ್ ಕರೆಯಿಂದ ರಜಿನಿ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಈಗ ಮತ್ತೆ ವಿಜಯ್ ಮನೆಗೆ ಹುಸಿಬಾಂಬ್ ಕರೆ ಬಂದಿದೆ.

Comments

Leave a Reply

Your email address will not be published. Required fields are marked *