ತಪ್ಪು ಮಾಡಿದ್ದ ನನ್ನ ಪತಿ ಈ ದುರಾದೃಷ್ಟಕ್ಕೆ ಅರ್ಹ: ಗ್ಯಾಂಗ್‍ಸ್ಟರ್ ಪತ್ನಿ

ಲಕ್ನೋ: ನನ್ನ ಪತಿ ಮಾಡಿದ್ದು ತಪ್ಪು ಕೆಲಸ. ಹೀಗಾಗಿ ಅವರು ಈ ದುರಾದೃಷ್ಟಕ್ಕೆ ಅರ್ಹರಾಗಿದ್ದಾರೆ ಎಂದು ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಖ್ಯಾತ ರೌಡಿ ವಿಕಾಸ್ ದುಬೆ ಪತ್ನಿ ಆಕ್ರೋಶದಿಂದ ಹೇಳಿದ್ದಾಳೆ. ಇದನ್ನೂ ಓದಿ: ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್- ಎಸ್ಕೇಪ್ ಆಗಲು ಯತ್ನಿಸ್ತಿದ್ದಂತೆ ಶೂಟೌಟ್

ಪೊಲೀಸರು ಎನ್‍ಕೌಂಟರ್ ಮಾಡಿ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಹತ್ಯೆ ಮಾಡಿದ್ದರು. ಶುಕ್ರವಾರ ಕಟ್ಟುನಿಟ್ಟಿನ ಭದ್ರತೆಯ ಮಧ್ಯೆ ಕಾನ್ಪುರದಲ್ಲಿ ಆತನ ಅಂತ್ಯಸಂಸ್ಕಾರ ನೆರವೇರಿದೆ. ಇದನ್ನೂ ಓದಿ: ದುಬೆ ದುಷ್ಕೃತ್ಯಕ್ಕೆ ಸಾಥ್ – ಪಂಚಾಯತ್ ಚುನಾವಣೆ ಗೆದ್ದಿದ್ದ ಪತ್ನಿ ಅರೆಸ್ಟ್

ಪತಿಯ ಅಂತ್ಯಸಂಸ್ಕಾರಕ್ಕೆ ವಿಕಾಸ್ ದುಬೆ ಪತ್ನಿ ರಿಚಾ ಮಗನೊಂದಿಗೆ ಬಂದಿದ್ದಳು. ಈ ವೇಳೆ ರಿಚಾಳನ್ನು ಮಾಧ್ಯಮದವರು ಪ್ರಶ್ನೆ ಮಾಡಿದ್ದಕ್ಕೆ ಅವರ ಮೇಲೆಯೇ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾಳೆ. “ಹೌದು ಹೌದು ಹೌದು. ನನ್ನ ಪತಿ ಮಾಡುತ್ತಿದ್ದ ಕೆಲಸ ತಪ್ಪಾಗಿತ್ತು. ಹೀಗಾಗಿ ಜೀವನದಲ್ಲಿ ಆತ ಮಾಡಿದ ತಪ್ಪಿನಿಂದ ಈ ದುರಾದೃಷ್ಟಕ್ಕೆ ಅರ್ಹರಾಗಿದ್ದಾರೆ” ಎಂದು ಹೇಳಿದ್ದಾಳೆ. ಅಲ್ಲದೇ ನನಗೆ ತೊಂದರೆ ಕೊಡಬೇಡಿ ಇಲ್ಲಿಂದ ಹೋಗಿ. ನನ್ನ ಪತಿಯ ಎನ್‌ಕೌಂಟರ್‌ ಆಗಲು ನೀವು ಕಾರಣ ಎಂದು ಮಾಧ್ಯಮದವರ ಮೇಲೆಯೇ ಆರೋಪ ಮಾಡಿದ್ದಾಳೆ.

ದುಬೆಯ ಬಾವ ದಿನೇಶ್ ತಿವಾರಿ ಆತನ ಪತ್ನಿ ಮತ್ತು ಮಗನ ಸಮ್ಮುಖದಲ್ಲಿ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದನು. ಪೊಲೀಸ್ ಉಪಸ್ಥಿತಿಯ ನಡುವೆ ವಿಕಾಶ್ ದುಬೆಯ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಶ್ರೀವಾಸ್ತವ ಹೇಳಿದರು.

ಎನ್‍ಕೌಂಟರ್:
ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಶುಕ್ರವಾರ ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.

ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದಾರೆ. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದಾರೆ. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.

Comments

Leave a Reply

Your email address will not be published. Required fields are marked *