ತನ್ನಿಬ್ಬರು ಹೆಣ್ಣು ಮಕ್ಕಳ ಎದುರೇ ಪತ್ರಕರ್ತನಿಗೆ ಥಳಿಸಿ, ಗುಂಡಿಕ್ಕಿದ್ರು!

– ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನ
– ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಘೋಷಣೆ

ಲಕ್ನೋ: ದೆಹಲಿ ಸಮೀಪದ ಗಾಜಿಯಾಬಾದ್ ನಲ್ಲಿ ಉತ್ತರ ಪ್ರದೇಶ ಮೂಲದ ಪತ್ರಕರ್ತರೊಬ್ಬರಿಗೆ ಅವರ ಇಬ್ಬರು ಪುತ್ರಿಯರ ಎದುರೇ ಅಪರಿಚಿತ ತಂಡವೊಂದು ಗುಂಡಿಕ್ಕಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಪತ್ರಕರ್ತ ವಿಕ್ರಮ್ ಜೋಶಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದಾರೆ. ಈ ವೇಳೆ ಜೋಶಿ ಪುತ್ರಿಯರು ಅಳುತ್ತಾ, ಕಿರುಚಾಡುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಕಾಣಬಹುದಾಗಿದೆ.

ನಡೆದಿದ್ದೇನು..?
ಸೋಮವಾರ ರಾತ್ರಿ ವಿಕ್ರಮ್ ಜೋಶಿ ಅವರು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. 10.30ರ ಸುಮಾರಿಗೆ ತಂಡವೊಂದು ನೇರವಾಗಿ ವಿಕ್ರಮ್ ಮೇಲೆ ದಾಳಿ ಮಾಡಿದೆ. ಅಲ್ಲದೆ ಗುಂಡಿನ ಮಳೆ ಸುರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರವಿ ಹಾಗೂ ಚೋಟು ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈತಾನಿ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಪತ್ರಕರ್ತ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಮೃತನ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಪೊಲೀಸರ ಮೇಲೆ ಆರೋಪ ಹೊರಿಸಿರುವ ಮೃತನ ಕುಟುಂಬ, ಜೋಶಿ ಮೇಲೆ ದಾಳಿ ಮಾಡುವ 4 ದಿನಕ್ಕೆ ಮುಂಚೆ ಆತ ತನ್ನ ಸೊಸೆಯ ಮೇಲೆ ಯುವಕರ ತಂಡವೊಂದು ದೌರ್ಜನ್ಯ ನಡೆಸಿದೆ ಎಂದು ದೂರು ನೀಡಿದ್ದನು ಎಂದು ಹೇಳಿದೆ.

ಸಿಸಿಟಿವಿ ವಿಡಿಯೋದಲ್ಲಿ ಯುವಕರ ಗುಂಪೊಂದು ಮನೆಯ ಬಳಿಯೇ ಜೋಶಿಯನ್ನು ತಡೆದು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜೋಶಿ ತನ್ನ ಬೈಕ್ ತೆಗೆದು ಮನೆಯಿಂದ ಹೊರಡುತ್ತಿದಂತೆಯೇ ಏಕಾಏಕಿ ತಂಡ ಬಂದು ಜೋಶಿ ಸುತ್ತುವರಿದಿದೆ. ನೋಡನೋಡುತ್ತಿದ್ದಂತೆಯೇ ತಂಡ ಹಿಗ್ಗಾಮುಗ್ಗ ಥಳಿಸಲು ಆರಂಭಿಸಿದೆ. ಇತ್ತ ಘಟನೆಯಿಂದ ಬೆದರಿದ ಜೋಶಿ ಇಬ್ಬರು ಹೆಣ್ಣು ಮಕ್ಕಳು ಓಡಿ ಹೋಗಿ ಗ್ಯಾಂಗ್ ಕೈಯಿಂದ ತಪ್ಪಿಸಿಕೊಂಡಿದ್ದಾರೆ.

ಗುಂಪು ಜೋಶಿಯನ್ನು ಎಳೆದಾಡಿ ಕಾರು ಬಳಿ ಕರೆತಂದು ಮತ್ತೆ ಹೊಡೆಯಲು ಆರಂಭಿಸಿದೆ. ಕೊನೆಗೆ ಹೇಗೋ ಜೋಶಿ ಅವರಿಂದ ತಪ್ಪಿಸಿಕೊಂಡಿದ್ದಾರೆ. ಆ ನಂತರ ನೆಲಕ್ಕೆ ಬಿದ್ದು ನೋವಿನಿಂದ ಒದ್ದಾಡಿದ್ದಾರೆ. ಈ ವೇಳೆ ಅವಿತು ಕುಳಿತಿದ್ದ ಮಕ್ಕಳ, ತಂದೆಯ ಬಳಿ ಬಂದು, ಅಳುತ್ತಾ ಸಹಾಯಕ್ಕಾಗಿ ಕೂಗಾಡಿದ್ದಾರೆ.

ಸದ್ಯ ವಿಕ್ರಮ್ ಜೋಶಿ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಹೇಳಿದ್ದು ರಾಮ ರಾಜ್ಯ, ತಂದಿದ್ದು ಗೂಂಡಾ ರಾಜ್ಯ- ಯೋಗಿ ಸರ್ಕಾರದ ವಿರುದ್ಧ ‘ರಾಗಾ’ ಕಿಡಿ

Comments

Leave a Reply

Your email address will not be published. Required fields are marked *