ತನ್ನನ್ನು ಕಾಪಾಡುವಂತೆ ಕನ್ನಂಬಾಡಿ ಕೂಗಿ ಹೇಳುತ್ತಿದೆ: ಸುಮಲತಾ

– ಗೋಡೆ ಕುಸಿದಿದ್ದು ಎಲ್ಲಿ? ಅಧಿಕಾರಿಗಳು ಹೇಳಿದ್ದೇನು?

ನವದೆಹಲಿ: ಕನ್ನಂಬಾಡಿ ಅಣೆಕಟ್ಟು ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಸಂದೇಶ, ತನ್ನನ್ನು ಕಾಪಾಡುವಂತೆ ಡ್ಯಾಂ ಕೂಗಿ ಹೇಳುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಕೆಆರ್‌ಎಸ್ ಡ್ಯಾಂ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ರೀತಿಯ ಡ್ಯಾಂ ಮುಂದೆ ನಿರ್ಮಿಸಲು ಸಾಧ್ಯವಿಲ್ಲ, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಗೋಡೆ ಕುಸಿದಿದೆ ಎಂದು ನಿರ್ಲಕ್ಷ್ಯ ಮಾಡಿ ಸುಮ್ಮನೆ ಕೋರಲು ಸಾಧ್ಯವಿಲ್ಲ, ಕಿಡ್ನಿಗೆ ಇನ್ಫೆಕ್ಷನ್ ಆಗಿದೆ ಲಿವರ್‌ಗೆ ಏನು ಆಗಲ್ಲ ಅಥವ ಕೊರೊನಾ ಚೀನಾದಲ್ಲಿದೆ ಭಾರತದಲ್ಲಿ ಏನು ಆಗಲ್ಲ ಅಂತಾ ಸುಮ್ನೆ ಕೂತರೆ ಆಗುತ್ತಾ? ಹಾಗೇ ಗೋಡೆ ಕುಸಿತ ಅನ್ನೊದು ಎಚ್ಚರಿಕೆ ಸಂದೇಶವಾಗಿದ್ದು ಈಗಲೇ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರಕ್ಕೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಂಗೂ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ಮಾಹಿತಿ ನೀಡುತ್ತಿದ್ದಾರೆ. ಗೋಡೆ ಕುಸಿತದ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

ಕೆಆರ್‌ಎಸ್ ವಿಚಾರದಲ್ಲಿ ನಾವು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ, ಈ ವಿಚಾರದಲ್ಲಿ ರಾಜಕೀಯ ಮಾಡಿದವರು ಗೋಡೆ ಕುಸಿತದ ಬಗ್ಗೆ ಏನ್ ಹೇಳ್ತಾರೆ ಅಂತಾ ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕುಟುಕಿದರು. ಕೆಆರ್‌ಎಸ್ ಸದ್ಯಕ್ಕೆ ಸೇಫಾಗಿದ್ದು ಅದು ಮುಂದೆಯೂ ಸುರಕ್ಷಿತವಾಗಿರಬೇಕು ಎನ್ನುವುದು ನಮ್ಮ ಬಯಕೆ ಎಂದು ಸುಮಲತಾ ಹೇಳಿದರು. ಇದನ್ನೂ ಓದಿ:  KRS ಡ್ಯಾಂ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತ

ಗೋಡೆ ಕುಸಿದಿದ್ದು ಎಲ್ಲಿ? ಅಧಿಕಾರಿಗಳು ಹೇಳಿದ್ದೇನು?

ಕೆಆರ್‌ಎಸ್ ಡ್ಯಾಂನ 80 ಪ್ಲಸ್ ಅಡಿ ಗೇಟುಗಳ ಬಳಿಯಲ್ಲಿರುವ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತಗೊಂಡಿದ್ದು, ಡ್ಯಾಂನಿಂದ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗಲು ಈ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲ ಮೇಲೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಸತತ ಮಳೆಯಿಂದಾಗಿ ಕಲ್ಲುಗಳು ಕುಸಿದಿವೆ ಎನ್ನಲಾಗಿದೆ. ಇದನ್ನೂ ಓದಿ: ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ: ಸುಮಲತಾ

ಯಾರೂ ಆತಂಕಪಡುವ ಅಗತ್ಯವಿಲ್ಲ. ಇದು ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗುವ ಮಾರ್ಗದ ಮೆಟ್ಟಿಲುಗಳ ಬಳಿ ಕಲ್ಲು ಕುಸಿದಿವೆ. ಇದಕ್ಕೂ ಅಣೆಕಟ್ಟೆಗೂ ಯಾವುದೇ ಸಂಬಂಧವಿಲ್ಲ. ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರೋದರಿಂದ ಕಲ್ಲುಗಳು ಕುಸಿದಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *