ತಡರಾತ್ರಿ ಯಡಿಯೂರಪ್ಪರನ್ನ ಭೇಟಿಯಾದ 30 ಶಾಸಕರು – 6ಕ್ಕೂ ಹೆಚ್ಚು ಸಚಿವರ ವಿರುದ್ಧ ದೂರು!

– ಇಬ್ಬರ ಜಗಳದಲ್ಲಿ ಬಡವಾಗ್ತಿದ್ದಾರಾ ಶಾಸಕರು?

ಬೆಂಗಳೂರು: ಬಿಜೆಪಿಯ 30 ಶಾಸಕರು ತಡರಾತ್ರಿ ಮುಖ್ಯಮಂತ್ರಿಗಳನ್ನ ಭೇಟಿಯಾಗಿದ್ದು, ಕೆ.ಎಸ್.ಈಶ್ವರಪ್ಪ ಸೇರಿದಂತೆ ಆರಕ್ಕೂ ಹೆಚ್ಚು ಸಚಿವರ ವಿರುದ್ಧ ದೂರು ಸಲ್ಲಿಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಶಾಸಕ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ 30 ಶಾಸಕರ ತಂಡ ಯಡಿಯೂರಪ್ಪರನ್ನ ಭೇಟಿಯಾಗಿದೆ ಎನ್ನಲಾಗಿದೆ.

ಯಾಕೆ ಈ ಭೇಟಿ?: ಶಾಸಕರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರ ಗಮನಕ್ಕೆ ತರದೇ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ತಮ್ಮ ಗಮನಕ್ಕೆ ತರದೇ ತಮ್ಮ ಇಲಾಖೆಯ ಅನುದಾನ ರಿಲೀಸ್ ಮಾಡಿದ್ದಕ್ಕೆ ಈಶ್ವರಪ್ಪ ಮುನಿಸಿಕೊಂಡಿದ್ದಾರೆ. ಹಾಗಾಗಿ ಸಿಎಂ ಸಹಿ ಮಾಡಿ ನೀಡಿದ ಅನುದಾನವನ್ನ ಈಶ್ವರಪ್ಪ ತಡೆಯುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಈಶ್ವರಪ್ಪ ಸೇರಿದಂತೆ ಆರು ಸಚಿವರ ವಿರುದ್ಧ ಶಾಸಕರು ಸಿಎಂಗೆ ದೂರು ಸಲ್ಲಿಸಿ, ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಶಾಸಕರ ದೂರಿನ ಹಿನ್ನೆಲೆ ಮಾರ್ಚ್ 25ಕ್ಕೆ ಇಲಾಖಾ ಅಧಿಕಾರಿಗಳ ಸಭೆಯನ್ನ ಸಿಎಂ ಕರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಶ್ವರಪ್ಪ ಮತ್ತು ಸಿಎಂ ನಡುವೆ ಮತ್ತೆ ಕೋಲ್ಡ್ ವಾರ್ ಆರಂಭಗೊಂಡಿದೆಯಾ ಅನ್ನೋ ಚರ್ಚೆಗಳು ರಾಜ್ಯ ಬಿಜೆಪಿ ಅಂಗಳದಲ್ಲಿ ಆರಂಭಗೊಂಡಿವೆ.

Comments

Leave a Reply

Your email address will not be published. Required fields are marked *