ತಂದೆಗೆ ವಿಚ್ಛೇದನ ನೀಡದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 17ರ ಮಗ!

– ಉಪಾಯದಿಂದ ತಾಯಿಯ ಕೊಲೆಗೈದ ಅಪ್ರಾಪ್ತ

ನವದೆಹಲಿ: ತಂದೆಗೆ ವಿಚ್ಛೇದನ ನೀಡಲು ಒಪ್ಪದಿದ್ದರಿಂದ 17 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಆರೋಪಿಯ ತಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದನು. ಆದರೆ ತಾಯಿ ಇದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಇತ್ತ ತಾಯಿಗೆ ತಂದೆ ವಿಚ್ಛೇದನದ ಅರ್ಜಿ ಹಾಕಿದ್ದರಿಂದ ಗೆಳೆಯರು ಗೇಲಿ ಮಾಡಲು ಆರಂಭಿಸಿದ್ದರು. ಇದರಿಂದ ಸಿಟ್ಟಿಗೆದ್ದ ಹುಡುಗ ಈ ಕೃತ್ಯ ಎಸಗಿದ್ದಾನೆ ಎಂಬುದಾಗಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.

ಸದ್ಯ ಘಟನೆ ಸಂಬಂಧಿಸಿದಂತೆ ಹುಡುಗನನ್ನು ಬಂಧಿಸಿರುವ ಪೊಲೀಸರು ರಿಮ್ಯಾಂಡ್ ಹೋಂಗೆ ಕಳುಹಿಸಿದ್ದಾರೆ. ಸಂತ್ರಸ್ತೆ ತನ್ನ ಕಿರಿಯ ಮಗ ಹಾಗೂ ಮಗಳೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದರು.

ಸುಮಾರು ಮೂರು ವರ್ಷಗಳ ಹಿಂದೆ ಮಹಿಳೆ ತನ್ನ ಗಂಡನಿಂದ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಗಂಡ ತನಗೆ ವಿಚ್ಛೇದನ ನೀಡುವಂತೆ ಕೋರ್ಟ್ ಮೆಟ್ಟಿಲು ಹತ್ತಿದ್ದನು. ಆದರೆ ಮಹಿಳೆ ಮಾತ್ರ ಪತಿಗೆ ವಿಚ್ಛೇದನ ನೀಡಲು ಮುಂದಾಗಿಲ್ಲ. ಹೀಗಾಗಿ ಈ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದೆ.

ತಂದೆಯೊಂದಿಗೆ ವಾಸ ಮಾಡುತ್ತಿದ್ದ ಹಿರಿಯ ಮಗ, ಅಪ್ಪ ವಿಚ್ಛೇದನ ನೀಡಲು ಅಮ್ಮನೇ ಕಾರಣ ಎಂದು ಪದೇ ಪದೇ ಹೇಳುತ್ತಿದ್ದನು. ಅಲ್ಲದೆ ಒಂದು ವೇಳೆ ತಾಯಿ, ತಂದೆಗೆ ಡಿವೋರ್ಸ್ ನೀಡಲು ಒಪ್ಪಿಕೊಳ್ಳದಿದ್ದರೆ ಆಕೆಯನ್ನು ಒಡಹುಟ್ಟಿದವರ ಮುಂದೆಯೇ ಹತ್ಯೆ ಮಾಡುವುದಾಗಿ ಬೆದರಿಕೆ ಕೂಡ ಹಾಕುತ್ತಿದ್ದನು ಎಂದು ಆರೋಪಿಯ ಸಹೋದರಿ ಪೊಲೀಸರ ಬಳಿ ಹೇಳಿದ್ದಾಳೆ.

ನವೆಂಬರ್ 30 ರಂದು ಆರೋಪಿ ತಡರಾತ್ರಿ ತನ್ನ ತಾಯಿಯನ್ನು ಭೇಟಿ ಮಾಡಿ ಊಟ ಕೇಳಿದಾಗ ಈ ಕೊಲೆ ನಡೆದಿದೆ. ಮನೆಗೆ ಬಂದ ಮಗನಿಗೆ ತಾಯಿ ಊಟ ನೀಡಿದ್ದಾರೆ. ಹೀಗೆ ಮಗ ಊಟ ಮಾಡುತ್ತಿದ್ದಾಗ ಆತನ ಜಾಕೆಟ್ ನಲ್ಲಿದ್ದ ಚಾಕುವನ್ನು ತಾಯಿ ನೋಡಿದ್ದಾರೆ. ಇದು ಮಗನ ಗಮನಕ್ಕೆ ಬಂದಾಗ ಆತ ಕೂಡಲೇ ಕಾಣದಂತೆ ನಾಟಕ ಮಾಡಿದ್ದಾನೆ. ಈ ವೇಳೆ ತಾಯಿ ಚಾಕು ಯಾಕೆ ಇಟ್ಟುಕೊಂಡಿದ್ದೀಯಾ ಎಂದು ಕೆಳಿದ್ದಾರೆ. ಆಗ ಆರೋಪಿ ಮಗ, ಅದು ತನ್ನ ಸ್ನೇಹಿತನಿಗಾಗಿ ಎಂದು ಹೇಳಿದ್ದಾನೆ.

ಊಟ ಮಾಡಿದ ಬಳಿಕ ತುಂಬಾ ತಡವಾಗಿದೆ. ನೀನು ನನ್ನನ್ನು ಮನೆಗೆ ಬಿಟ್ಟು ಬಾ ಎಂದು ತಾಯಿ ಬಳಿ ಮಗ ಹೇಳಿದ್ದಾನೆ. ಇದಕ್ಕೊಪ್ಪಿದ ತಾಯಿ ಆತನನ್ನು ಬಿಡಲು ಹೋಗಿದ್ದಾರೆ. ಮಧ್ಯರಾತ್ರಿ 12.40ರ ಸುಮಾರಿಗೆ ಮನೆಯಿಂದ ಹೋದ ಮಹಿಳೆ ಮನೆಗೆ ವಾಪಸ್ ಬಂದಿರಲಿಲ್ಲ.

ಡಿಸೆಂಬರ್ 1 ರಂದು ಮಹಿಳೆಯ ಶವ ಮನೆಯ ಸಮೀಪ ಇಟ್ಟಿಗೆಗಳ ರಾಶಿಯಲ್ಲಿ ಪತ್ತೆಯಾಗಿದೆ. ನಂತರ ಪೊಲೀಸರು ಸ್ಥಳೀಯ ನಿವಾಸಿಗಳ ಸಹಾಯದಿಂದ ಶವವನ್ನು ಗುರುತಿಸಿ ಆಕೆಯ ಮಗಳನ್ನು ಸಂಪರ್ಕ ಮಾಡಿದ್ದಾರೆ. ಸಂತ್ರಸ್ತೆಯ ಮಗಳು ತನ್ನ ಸಹೋದರನನ್ನು ಸಂಪರ್ಕಿಸಲು ಪ್ರಯತ್ನಿಸಿದಳು. ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ಸ್ಥಳೀಯ ನಿವಾಸಿಗಳ ಸಹಾಯದಿಂದ ಪೊಲೀಸರು ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ತನ್ನ ತಾಯಿ ತಂದೆಗೆ ವಿಚ್ಛೇದನ ನೀಡುತ್ತಿಲ್ಲ ಎಂದು ಕೋಪಗೊಂಡಿದ್ದೆ. ಈ ವಿಷಯದ ಬಗ್ಗೆ ಸ್ನೇಹಿತರು ಅಪಹಾಸ್ಯ ಮಾಡುತ್ತಿದ್ದರು ಎಂದು ಆರೋಪಿಸಿದ್ದಾನೆ. ಹೀಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *