ತಂದೆ ಬಿಡುಗಡೆಗೆ ಪೊಲೀಸ್ ವ್ಯಾನ್‍ಗೆ ತಲೆ ಚಚ್ಚಿಕೊಂಡ ಬಾಲಕಿ- ಕಂದಮ್ಮಗಳಿಗೆ ದೀಪಾವಳಿ ಗಿಫ್ಟ್ ಕೊಟ್ಟ ಸಿಎಂ

ಲಕ್ನೋ: ಕಂದಮ್ಮನ ಆಕ್ರಂದನವನ್ನು ನೋಡಲಾರದೆ ಬಡ ಪಟಾಕಿ ವ್ಯಾಪಾರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಬಂಧನದಿಂದ ಬಿಡುಗಡೆಗೊಳಿಸಿ ಬಾಲಕಿಗೆ ದೀಪಾವಳಿ ಗಿಫ್ಟ್ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಉತ್ತರ ಪ್ರದೇಶದ ಬುಲಾಂದ್‍ಶಹರ್ ನ ಖುರ್ಜಾದಲ್ಲಿ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಮಾರುವಂತಿಲ್ಲ. ಆದರೆ ಈ ಮಾರುಕಟ್ಟೆಯಲ್ಲಿ ಕದ್ದು ಮುಚ್ಚಿ ಪಟಾಕಿ ಮಾರಲಾಗುತ್ತಿತ್ತು. ಅಂತಹವರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಬಾಲಕಿಯ ತಂದೆಯನ್ನೂ ಬಂಧಿಸಲಾಗಿದೆ. ಅಪ್ಪನನ್ನು ಎಳೆದುಕೊಂಡು ಹೋಗುವುದನ್ನು ನೋಡಲಾಗದೆ ಬಾಲಕಿ ತಕ್ಷಣವೇ ಜೋರಾಗಿ ಅಳಲು ಪ್ರಾರಂಭಿಸಿದ್ದು, ತಂದೆಯನ್ನು ಬಂಧಿಸದಂತೆ ಪೊಲೀಸರ ಬಳಿ ಗೋಗರೆದಿದ್ದಾಳೆ. ಆದರೆ ಪೊಲೀಸರು ಲೆಕ್ಕಿಸಿಲ್ಲ.

ಬಳಿಕ ಪೊಲೀಸರು ವ್ಯಾಪಾರಿಯನ್ನು ವ್ಯಾನ್ ಬಳಿ ಎಳೆ ತಂದಿದ್ದಾರೆ. ಈ ವೇಳೆ ಸಹ ಬಾಲಕಿ ಬೇಡಿಕೊಂಡಿದ್ದಾಳೆ. ಆದರೆ ಪೊಲೀಸರು ಕೇಳಿಲ್ಲ. ಹೀಗಾಗಿ ವ್ಯಾನ್‍ಗೆ ಹಲವು ಬಾರಿ ತಲೆ ಚೆಚ್ಚಿಕೊಂಡಿದ್ದಾಳೆ. ಆದರೂ ಪೊಲೀಸರು ವ್ಯಾಪಾರಿಯನ್ನು ಬಂಧಿಸಿ ಕೊಂಡೊಯ್ದಿದ್ದಾರೆ. ಘಟನೆಯ ಸಂಪೂರ್ಣ ಚಿತ್ರಣವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಸಹ ಈ ವಿಡಿಯೋ ನೋಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ವ್ಯಾಪಾರಿಯನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ತಂದೆಯನ್ನು ಬಂಧಿಸದಂತೆ ಬಾಲಕಿ ಪೊಲೀಸರ ಕೈ ಹಿಡಿದು ಎಳೆದಿದ್ದಾಳೆ. ಅಲ್ಲದೆ ಪೊಲೀಸರ ವ್ಯಾನ್‍ಗೆ ತಲೆ ಚೆಚ್ಚಿಕೊಂಡಿದ್ದು ಎಂತಹವರಿಗಾದರೂ ಕರುಳು ಹಿಂಡಿದಂತಾಗುತ್ತದೆ. ಹೀಗಾಗಿ ವಿಡಿಯೋ ಗಮನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಗುವಿನ ತಂದೆಯನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಬಾಲಕಿಯ ಮನೆಗೆ ಸ್ವೀಟ್ ಹಾಗೂ ಗಿಫ್ಟ್‍ಗಳನ್ನು ಸಹ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಬುಲಾಂದ್‍ಶಹರ್ ಎಸ್‍ಪಿ ಸಂತೋಷ್ ಕುಮಾರ್ ಸಿಂಗ್ ಖಚಿತಪಡಿಸಿದ್ದು, ಸಿಎಂ ಆದೇಶದ ಮೇರೆಗೆ ಪೊಲೀಸರು ಬಾಲಕಿಯ ಮನೆಗೆ ತೆರಳಿ ಸ್ವೀಟ್ ಹಾಗೂ ಗಿಫ್ಟ್ ನೀಡಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಮಾನವೀಯತೆ ಮರೆತ ಪೊಲೀಸರು
ಬಾಲಕಿ ಅಷ್ಟು ಗೋಗರೆದರೂ ಪೊಲೀಸರು ಕ್ಯಾರೆ ಎನ್ನದೆ ಎಳೆದೊಯ್ದಿದ್ದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಹೀಗಾಗಿ ಸಿಎಂ ಎಚ್ಚೆತ್ತು ಬಿಡುಗಡೆಗೆ ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *