ಡ್ರಗ್ ಪ್ರಕರಣದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ

– ರಾಜ್ಯ ಅಂತೂ ದಿವಾಳಿಯಾಗಿ ಹೋಗಿದೆ

ಹುಬ್ಬಳ್ಳಿ: ಡ್ರಗ್ ಪ್ರಕರಣದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಜಾಲದಲ್ಲಿ ದೊಡ್ಡವರು ಸಣ್ಣವರು ಅನ್ನೋದು ಬೇಡ. ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಆಗ್ರಹ ಮಾಡಿದರು.

ಶಾಸಕ ಜಮೀರ್ ಅಹಮದ್ ವಿರುದ್ಧ ಸಾಕ್ಷ್ಯ ಇದ್ದರೆ ಗಲ್ಲಿಗೆ ಹಾಕಲಿ ಎಂದು ಅವರೇ ಹೇಳಿದ್ದಾರೆ. ಜೊತೆಗೆ ಅವರು ಆಸ್ತಿಯೆಲ್ಲಾ ಮುಟ್ಟುಗೋಲು ಹಾಕಿಕೊಳ್ಳಲಿ ಅಂತಾ ಹೇಳಿದ್ದಾರೆ. ಸಾಕ್ಷ್ಯ ಸಿಕ್ಕರೆ ತನಿಖೆ ಮಾಡಲಿ ಅದನ್ನು ಬಿಟ್ಟು ರಾಜಕೀಯವಾಗಿ ಮುಗಿಸಲು ಆರೋಪ ಮಾಡಬಾರದು. ಪ್ರಶಾಂತ್ ಸಂಬರಗಿ ಹೇಳಿದರು ಎಂದು ತನಿಖೆ ಮಾಡೋಕೆ ಆಗುತ್ತಾ? ಸಾಕ್ಷ್ಯ ಇದ್ದರೆ ಯಾರನ್ನಾದರೂ ತನಿಖೆ ಮಾಡಲಿ ಎಂದು ತಿಳಿಸಿದರು.

ಇದೇ ವೇಳೆ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿಗೆ ನೋಟಿಸ್ ಜಾರಿ ವಿಚಾರವಾಗಿ ಮಾತನಾಡಿ, ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ. 25 ಬಿಜೆಪಿ ಸಂಸದರು ಇದ್ದರೂ ಬರ-ನೆರೆ ಪ್ರವಾಹ ಇನ್ನೂ ಕೊಟ್ಟಿಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಮನೆ ಬಿದ್ದವರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಆನೆ ಹೊಟ್ಟೆಗೆ ಮೂರು ಕಾಸು ಅಲ್ಲ ಆರು ಕಾಸಿನ ಮಜ್ಜಿಗೆ ನೀಡಿದಂತೆ ಪರಿಹಾರ ನೀಡಿದ್ದಾರೆ ಎಂದು ಕಿಡಿಕಾರಿದರು.

ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಸುತ್ತೇವೆ. ಮೂರು ವಾರಗಳ ಕಾಲ ಅಧಿವೇಶನ ನಡೆಸಲಿ ಎಂದು ನಾನು ಸಿಎಂ ಬಿಎಸ್‍ವೈಗೆ ಪತ್ರ ಬರೆದಿದ್ದೇನೆ. ನಾಲ್ಕು ಜನರ ವಿರುದ್ಧ ಗೋಲಿಬಾರ್ ಮಾಡಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸತ್ಯ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ನವೀನನನ್ನು ತಕ್ಷಣ ಬಂಧನ ಮಾಡಿದ್ದರೆ ಬೆಂಕಿ ಹಚ್ಚುತ್ತಿರಲಿಲ್ಲ. ಬೆಂಕಿ ಹಚ್ಚುವುದು ಕಾನೂನುಬಾಹಿರ. ನಾನು ಸಹ ಬೆಂಕಿ ಹಾಕಿರುವುದನ್ನು ಖಂಡಿಸುತ್ತೇನೆ ಎಂದರು.

ಸಿಎಂ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ. ಅವರು ಯಾರನಾದರೂ ಮಾಡಿಕೊಳ್ಳಲಿ. ಸಿಎಂ ಮತ್ತು ಕುಮಾರಸ್ವಾಮಿ ಏನೂ ಮಾತನಾಡಿಕೊಂಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಜೆಡಿಎಸ್‍ನವರಿಗೆ ಸ್ಪಷ್ಟವಾದ ನಿಲುವಿಲ್ಲ. ಅವರು ಯಾವಾಗ ಬೇಕೋ ಅವಾಗ ಅವರನ್ನು ತಬ್ಬಿಕೊಳ್ಳುತ್ತಾರೆ. ಆದರೆ ಇದರ ಮಧ್ಯೆ ರಾಜ್ಯ ಅಂತೂ ದಿವಾಳಿ ಆಗಿ ಹೋಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *