ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ

– ಲೈಫ್ ಈಸ್ ಶಾರ್ಟ್, ನೋ ಮ್ಯಾರೇಜ್ ಎಂಜಾಯ್ ಇಟ್ ಅಜೆಂಡಾ

– ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ

ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ತಿಂಗಳಿಗೆ ನಾಲ್ಕು ಲಕ್ಷ ಸಂಬಳ ಬರುತ್ತಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

ಡ್ರಗ್ ಮಾಫಿಯಾ ಪ್ರಕರಣದಲ್ಲಿ ದೆಹಲಿಯಲ್ಲಿ ಅರೆಸ್ಟ್ ಆದ ಡ್ರಗ್ ಕಿಂಗ್‍ಪಿನ್ ವೀರೇನ್ ಖನ್ನಾನ ಬಲಗೈ ಬಂಟನಾಗಿದ್ದ ಆದಿತ್ಯ ಆಗರ್ವಾಲ್, ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈತನಿಗೆ ತಿಂಗಳಿಗೆ 4 ಲಕ್ಷ ರೂ. ಸಂಬಳ ಬರುತ್ತಿತ್ತು. ಆದರೂ ಲೈಫ್ ಎಂಜಾಯ್ ಮಾಡಲು ಡ್ರಗ್ ದಂಧೆಗೆ ಇಳಿದಿದ್ದ.

ವೀರೇನ್ ಖನ್ನ ಮತ್ತು ಆದಿತ್ಯ ಆಗರ್ವಾಲ್ ಇಬ್ಬರು ಸೇರಿ ಬೆಂಗಳೂರಿನಲ್ಲಿ ಹೈಟೆಕ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು. ವೀರೇನ್ ಖನ್ನಾ ಇಲ್ಲದ ದಿನಗಳಲ್ಲಿ ಪಾರ್ಟಿಯನ್ನು ಆದಿತ್ಯ ಆಗರ್ವಾಲ್ ನೋಡಿಕೊಳ್ಳುತ್ತಿದ್ದ. ಜೊತೆಗೆ ಪಾರ್ಟಿಗಳಿಗೆ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದ. ನಾಲ್ಕು ಲಕ್ಷ ಸಂಬಳವನ್ನು ಈತ ಎರಡು ವಾರದಲ್ಲಿ ಉಡೀಸ್ ಮಾಡುತ್ತಿದ್ದ. ವೀರೇನ್ ಖನ್ನಾ ಇವನು ಒಟ್ಟಿಗೆ ಸೇರಿದ್ದರೆ, ಮೋಜು ಮಸ್ತಿಗೆ ದಿನಕ್ಕೆ ಲಕ್ಷದ ತನಕ ಖರ್ಚು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

ಜೊತೆಗೆ ಈ ಇಬ್ಬರು ಲೈಫ್ ಈಸ್ ವೆರಿ ಶಾರ್ಟ್, ಎಂಜಾಯ್ ಇಟ್ ಎಂಬ ಅಜೆಂಡಾವನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ನಾನು ಮದುವೆ ಆಗಲ್ಲ, ನೀನು ಮದುವೆ ಆಗಬೇಡ ಎಂದು ಇಬ್ಬರು ಮಾತನಾಡಿಕೊಂಡಿದ್ದರಂತೆ. ಬಂದ ಸಂಬಳವನ್ನು ಎರಡೇ ವಾರಕ್ಕೆ ಮುಗಿಸಿ ತಿಂಗಳ ಕೊನೆಯಲ್ಲಿ ಹಣಕ್ಕಾಗಿ ಇಬ್ಬರು ಡ್ರಗ್ ಡೀಲ್ ಮಾಡುತ್ತಿದ್ದರಂತೆ. ಈ ಕಾರಣಕ್ಕೆ 35 ವರ್ಷವಾದರೂ ಈ ಇಬ್ಬರು ಮದುವೆಯಾಗಿಲ್ಲ.

ಕಳೆದ ವಾರ ವೀರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ದೆಹಲಿಯಲ್ಲಿ ಬಂಧಿಸಿ ಕರೆತಂದಿದ್ದರು, ಸದ್ಯ ಆತ ಪೊಲೀಸರ ವಶದಲ್ಲಿದ್ದಾನೆ. ಈತನ ಮಾಹಿತಿ ಮೇರೆಗೆ ಆದಿತ್ಯ ಆಗರ್ವಾಲ್‍ನನ್ನು ಸಿಸಿಬಿ ಪೊಲೀಸರು ಹರಿಯಾಣದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

Comments

Leave a Reply

Your email address will not be published. Required fields are marked *