ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಹಳ್ಳ ಹಿಡಿಯುತ್ತದೆ – ಶಿವರಾಮೇಗೌಡ

– ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೇಲೆ ಸಿಬಿಐಗೆ ನೀಡುತ್ತೇವೆ

ಮಂಡ್ಯ: ರಾಜ್ಯದಲ್ಲಿ ಡ್ರಗ್ ಕೇಸ್ ಯಾವ ರೀತಿ ಹಳ್ಳ ಹಿಡಿದಿದೆ ಎಂದು ನಾವೆಲ್ಲ ನೋಡಿದ್ದೇವೆ. ಅದೇ ರೀತಿ ಸಿಡಿ ಕೇಸ್ ಸಹ ಹಳ್ಳ ಹಿಡಿಯುತ್ತದೆ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಗುಡುಗಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮೇಗೌಡ, ಡ್ರಗ್ ಕೇಸ್‍ನಲ್ಲಿ ಬಿಲ ಅಗೆದು ಹಿಡಿಯುವ ಹಾಗೆ ಬೇಕಾದವರನ್ನು ಬಿಟ್ಟು ಬೇಡವಾದವರನ್ನು ಹಿಡಿದರು. ಅದೇ ರೀತಿಯಲ್ಲಿ ಈ ಸಿಡಿ ಕೇಸ್ ಕೂಡ ಹಳ್ಳ ಹಿಡಿಯುತ್ತದೆ. ಪೊಲೀಸರು ಸರ್ಕಾರದ ಅನ್ನ ತಿನ್ನುತ್ತಿದ್ದೇವೆ ಎಂದು ಅಂದುಕೊಂಡಿದ್ದರೆ ಇಷ್ಟೊತ್ತಿಗೆ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕಿತ್ತು. ಆದರೆ ಇಲ್ಲಿಯವರಗೆ ಬಂಧಿಸುವ ಕೆಲಸ ಮಾತ್ರ ಆಗಿಲ್ಲ. ಮುಖ್ಯಮಂತ್ರಿಗಳು ಅತ್ಯಾಚಾರ ಆರೋಪಿಯನ್ನು ಉಪಚುನಾವಣೆಯ ಪ್ರಚಾರಕ್ಕೆ ಆಹ್ವಾನ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಈ ಕೇಸ್‍ಗೆ ನ್ಯಾಯವಾದರೂ ಹೇಗೆ ಸಿಗುತ್ತದೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

ಒಂದು ವೇಳೆ ಎಸ್‍ಐಟಿ ಅಧಿಕಾರಿಗಳು ಈ ಕೇಸ್‍ನ್ನು ಹಳ್ಳ ಹಿಡಿಸಿದರೆ, ನಾವು ಕೋರ್ಟ್‍ನಲ್ಲಿ ಈ ಬಗ್ಗೆ ದೂರು ದಾಖಲು ಮಾಡಿ ಸಿಬಿಐ ತನಿಖೆ ಆಗುವಂತೆ ಹೋರಾಟ ಮಾಡುತ್ತೇವೆ. ಮುಂದೆ ಕುಮಾರಸ್ವಾಮಿ ಅವರ ಸರ್ಕಾರ ಬಂದಾಗ ಈ ಕೇಸ್‍ನ್ನು ಸಿಬಿಐನಿಂದ ತನಿಖೆ ಮಾಡಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಅತ್ಯಾಚಾರಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ತಲೆ ತಗ್ಗಿಸಿ ಇರಬೇಕಾಗಿತ್ತು. ಆದರೆ ಅವರು ಸರ್ಕಾರವನ್ನು ಬೀಳಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಹೀಗೆ ಇರುವಾಗ ಈ ಕೇಸ್‍ನಲ್ಲಿ ಜಾರಕಿಹೊಳಿಗೆ ಕ್ಲೀನ್ ಚೀಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಯಾಪಟ್ಟರು.

Comments

Leave a Reply

Your email address will not be published. Required fields are marked *