ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ: ಎಚ್.ವಿಶ್ವನಾಥ್

– ಹ್ಯಾರಿಸ್ ಮಗನ ಮೇಲೆ ವಿಶ್ವನಾಥ್ ಗುಮಾನಿ
– ಪೊಲೀಸರಿಗೆ ಎಲ್ಲಾ ಗೊತ್ತಿದ್ದರೂ ಹೇಳುವ ಸ್ಥಿತಿಯಲಿಲ್ಲ

ಮೈಸೂರು: ಡ್ರಗ್ಸ್ ಮಾಫಿಯಾಗೆ ಪೊಲೀಸ್, ಚಿತ್ರರಂಗ, ರಾಜಕಾರಣ ಥಳಕು ಹಾಕಿಕೊಂಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳ ಡ್ರಗ್ಸ್ ನಂಟಿನ ಬಗ್ಗೆ ಮಾಜಿ ಸಚಿವ ಎಚ್ ವಿಶ್ವನಾಥ್ ಮಾತನಾಡಿ, ಶಾಸಕ ಹ್ಯಾರಿಸ್ ಹಾಗೂ ಕಳಕಪ್ಪಬಂಡಿ ಪುತ್ರರ ಹೆಸರನ್ನು ಉದಾಹರಣೆಯಾಗಿ ನೀಡಿದ್ದಾರೆ.

ಈ ಕುರಿತು ಮೈಸೂರಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ. ರಾಜಕಾರಣಿಗಳ ಶ್ರೀಮಂತಿಕೆ, ಅಧಿಕಾರಿಗಳ ಶ್ರೀಮಂತಿಕೆ, ಚಿತ್ರರಂಗದ ಶ್ರೀಮಂತಿಕೆಯಿಂದ ಇದು ಹೆಚ್ಚಾಗಿದೆ. ಶಾಸಕ ಹ್ಯಾರೀಸ್ ಪುತ್ರ, ಶಾಸಕ ಕಳಕಪ್ಪ ಬಂಡಿ ಪುತ್ರರ ಹೆಸರು ಈ ವಿಚಾರದಲ್ಲಿ ಬಹಿರಂಗಗೊಂಡಿದೆ ಎಂದು ಹೇಳಿದರು.

ಡ್ರಗ್ಸ್ ದಂಧೆ ಮಾಡುವವರು ಪ್ರಭಾವಿಯಾಗಿಲ್ಲ. ಅದಕ್ಕೆ ರಕ್ಷಣೆ ಕೊಡುವವರು ಪ್ರಭಾವಿಯಾಗಿದ್ದಾರೆ. ಇದು ಸರಿಯಲ್ಲ ಅದು ಯಾರೇ ಆಗಿದ್ದರೂ ದಂಡನೆ ಆಗಲೇಬೇಕು. ನಮ್ಮ ಮನೆಯ ಮಕ್ಕಳಾಗಿದ್ದರೂ ಸರಿಯೇ ಬಹಿರಂಗವಾಗಲೇಬೇಕು ಎಂದು ಆಗ್ರಹಿಸಿದ್ದರು.

ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರುತ್ತಿದೆ. ಯಾವುದೇ ಸರ್ಕಾರವನ್ನು ನಾವು ಬೊಟ್ಟು ಮಾಡಬಾರದು. ಇದು ನಿನ್ನೆ ಮೊನ್ನೆ ಪ್ರಕರಣ ಅಲ್ಲ, ನಮಗೆ ಅರಿವು ಇಲ್ಲದೆ ನಾವೇ ಬೆಳೆಸುಕೊಂಡು ಬಂದಿದ್ದೇವೆ. ಸೆಲೆಬ್ರಿಟಿಗಳ ಒಳಗೆ ಹರಡಿರೋ ದಂಧೆಯನ್ನು ಒಬ್ಬ ಸೆಲೆಬ್ರಿಟಿಯೇ ಬಹಿರಂಗ ಮಾಡಿದ್ದು ವಿಶೇಷ ಹಾಗೂ ಸೋಜಿಗ. ಪೊಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಆ ಸೆಲೆಬ್ರಿಟಿ ಮಾಡಿದ್ದಾನೆ. ಪೊಲೀಸರು ಈಗ ತಲೆಬಾಗಿ ಸಮಾಜದ ಮುಂದೆ ನಿಲ್ಲುವ ಪರಿಸ್ಥಿತಿಗೆ ಬಂದಿದ್ದಾರೆ. ಆದರೆ ಇಂತಹ ಗಂಭೀರ ಸಮಸ್ಯೆಯನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ. ಇಂತಹ ದಂಧೆಗಳ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ಸಹ ಅವರು ಹೇಳುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಸ್ಥಳದ ರಾಜಕಾರಣ ಆ ರೀತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಸೆಪ್ಟೆಂಬರ್ 8 ರಂದು ದಸರಾ ಉನ್ನತ ಮಟ್ಟದ ಮೊದಲ ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಮೈಸೂರಿನ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಬಾರಿಯ ದಸರಾ ಹೇಗೆ ನಡೆಸಬೇಕು ಹಾಗೂ ಜಂಬೂಸವಾರಿ ನಡೆಸಬೇಕೋ ಬೇಡವೋ ಎಂಬುದರ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಆರ್‍ಎಸ್‍ಎಸ್ ಕಚೇರಿಗೆ ಭೇಟಿ: ಇಂದು ಮೊದಲ ಬಾರಿಗೆ ಮೈಸೂರಿನ ಆರ್‍ಎಸ್‍ಎಸ್ ಕಚೇರಿಗೆ ಹಳ್ಳಿಹಕ್ಕಿ ವಿಶ್ವನಾಥ್ ಭೇಟಿ ನೀಡಿ ಕುತೂಹಲ ಮೂಡಿಸಿದರು. ನಗರದ ಬಲ್ಲಾಳ್ ವೃತ್ತದ ಬಳಿ ಇರುವ ಮಾಧವ ಕೃಪ ಕಚೇರಿಯಲ್ಲಿ ಆರ್‍ಎಸ್‍ಎಸ್ ಹಿರಿಯರ ಜೊತೆ ಮಾತುಕತೆ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.

Comments

Leave a Reply

Your email address will not be published. Required fields are marked *