ಡೇಟಿಂಗ್ ಆ್ಯಪ್‍ಗೆ 19ರ ಯುವಕನಿಂದ ಆಂಟಿಯ ನಂಬರ್ ಅಪ್ಲೋಡ್

– ಕೇಕ್ ಆರ್ಡರ್ ಕೊಡುವಾಗ ನಂಬರ್ ಕೊಟ್ಟಿದ್ದ ಮಹಿಳೆ

ಚೆನ್ನೈ: 19 ವರ್ಷದ ಯುವಕನೊಬ್ಬ ಡೇಟಿಂಗ್ ಆ್ಯಪ್‍ಗೆ ಮಹಿಳೆಯೊಬ್ಬರ ಫೋನ್ ನಂಬರನ್ನು ಅಪ್ಲೋಡ್ ಮಾಡಿದ್ದು, ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಯುವಕನನ್ನು ಡಿ.ವೆಂಕಟೇಶ್ ಎಂದು ಗುರುತಿಸಲಾಗಿದೆ. ಡೇಟಿಂಗ್ ಆ್ಯಪ್‍ಗೆ ಫೋನ್ ನಂಬರ್ ಅಪ್ಲೋಡ್ ಮಾಡಿದ ನಂತರ ಮಹಿಳೆ ಅನೇಕ ಫೋನ್ ಕರೆಗಳು ಮತ್ತು ಅಪರಿಚಿತ ನಂಬರ್‌ಗಳಿಂದ ಸಂದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ನಂತರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಡಿ.ವೆಂಕಟೇಶ್ ತಮಿಳುನಾಡಿನ ವಿಲ್ಲುಪುರಂ ನಿವಾಸಿಯಾಗಿದ್ದು, ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಸೆಪ್ಟೆಂಬರ್ 8 ರಂದು ಮಹಿಳೆ ಕೇಕ್ ಆರ್ಡರ್ ಮಾಡಲು ಬೇಕರಿಗೆ ಹೋಗಿದ್ದರು. ಈ ವೇಳೆ ಮಹಿಳೆ ತನ್ನ ಫೋನ್ ನಂಬರನ್ನು ವೆಂಕಟೇಶ್‍ಗೆ ಕೊಟ್ಟಿದ್ದರು. ನಂಬರ್ ಸಿಕ್ಕಿದ ತಕ್ಷಣ ಯುವಕ ಡೇಟಿಂಗ್ ಆ್ಯಪ್‍ಗೆ ಮಹಿಳೆಯ ಫೋನ್ ನಂಬರನ್ನು ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಡೇಟಿಂಗ್ ಆ್ಯಪ್‍ಗೆ ಫೋನ್ ನಂಬರ್ ಅಪ್ಲೋಡ್ ಮಾಡಿದ ನಂತರ ಮಹಿಳೆಗೆ ಅನೇಕ ಫೋನ್ ಕರೆಗಳು ಬಂದಿದ್ದು, ಅಶ್ಲೀಲವಾಗಿ ಮಾತನಾಡುತ್ತಿದ್ದರು. ಅಲ್ಲದೇ ಅಪರಿಚಿತ ನಂಬರ್‌ಗಳಿಂದ ಅಸಭ್ಯವಾದ ಮೆಸೇಜ್‍ಗಳು ಬರಲು ಪ್ರಾರಂಭಿಸಿದವು. ಕೊನೆಗೆ ಮಹಿಳೆ ಅಂಬತ್ತೂರು ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಶುರು ಮಾಡಿದ್ದರು.

ತನಿಖೆ ವೇಳೆ ಡೇಟಿಂಗ್ ಅಪ್ಲಿಕೇಶನ್‍ನಲ್ಲಿ ಮಹಿಳೆಯ ಫೋನ್ ನಂಬರ್ ಅಪ್ಲೋಡ್ ಮಾಡಿ ಆಕೆಯ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಲಾಗಿತ್ತು. ಅಲ್ಲದೇ ಆರೋಪಿ ಯುವಕ ತನ್ನ ಸಂಪರ್ಕ ವಿವರಗಳ ಮಾಹಿತಿಯನ್ನು ಡೇಟಿಂಗ್ ಅಪ್ಲಿಕೇಶನ್‍ನಲ್ಲಿ ಹಂಚಿಕೊಂಡಿದ್ದನು. ಇದೀಗ ಪೊಲೀಸರು ಆರೋಪಿ ವೆಂಕಟೇಶ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಆತನ ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *