ಡಿ.7ರ ವಾಟಾಳ್ ಸಭೆಯಲ್ಲಿ ಮುಂದಿನ ಹೋರಾಟದ ನಿರ್ಧಾರ: ಪ್ರವೀಣ್ ಶೆಟ್ಟಿ

ಬೆಂಗಳೂರು: ಮರಾಠಾ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವ ಹೋರಾಟಕ್ಕೆ ಸಂಬಂಧಪಟ್ಟಂತೆ ಸೋಮವಾರ ವಾಟಾಳ್ ನಾಗರಾಜ್ ಅವರು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಮುಂದಿನ ಹೋರಾಟದ ಹಾದಿಯ ಬಗ್ಗೆ ಚರ್ಚಿಸಿ ನಿರ್ಧರಿಸೋದಾಗಿ ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ಬಂಧಿಸಿರುವ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವಂತೆ ಸರ್ಕಾರವನ್ನ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಇಂದು ರಾಜ್ಯ ಬಂದ್‍ಗೆ ಕರೆ ನೀಡಿದ್ದವು. ಈ ಬಂದ್‍ಗೆ ನೈತಿಕ ಬೆಂಬಲ ಘೋಷಿಸಿದ ಕರವೇ ಪ್ರವೀಣ್ ಶೆಟ್ಟಿ ಬಣ ಮೇಖ್ರಿ ಸರ್ಕಲ್‍ನಿಂದ ಪ್ರತಿಭಟನಾ ಮೆರವಣಿಗೆ ಮಾಡಿ ಮೌರ್ಯ ಸರ್ಕಲ್‍ನಲ್ಲಿ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ಮಾಡಿದರು.

ಸಂಜೆ ವೇಳೆಗೆ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ಮಾತಾನಾಡಿದ ಪ್ರವೀಣ್ ಶೆಟ್ಟಿ, ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಇಂದು ಸಾಂಕೇತಿಕವಾಗಿ ಧರಣಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿರಲಿಲ್ಲ. ಸೋಮವಾರ ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಕನ್ನಡ ಪರ ಸಂಘಟನೆಗಳು ಇಂದು ರಾಜ್ಯ ಬಂದ್‍ಗೆ ಕರೆ ಕೊಟ್ಟಿದ್ದರೂ ಸರ್ಕಾರದ ಬಂದ್ ಯಶಸ್ವಿಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ಯೋಜನೆಗಳನ್ನ ಹಾಕಿಕೊಂಡಿತ್ತು. ಬೆಂಗಳೂರು ನಗರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಂದ್ ಆಗದಂತೆ ಕ್ರಮಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಂದ್ ಬಿಸಿ ಯಾರಿಗೂ ಅಷ್ಟಾಗಿ ತಟ್ಟಿರಲಿಲ್ಲ.

Comments

Leave a Reply

Your email address will not be published. Required fields are marked *