ಡಿಸಿ ಆದೇಶ ಉಲ್ಲಂಘಿಸಿ ತಹಶೀಲ್ದಾರ್ ಭರ್ಜರಿ ಬರ್ತ್ ಡೇ ಪಾರ್ಟಿ

– ಜನರಿಗೊಂದು ರೂಲ್ಸ್ ಅಧಿಕಾರಿಗಳಿಗೊಂದು ರೂಲ್ಸ್?

ಮಂಡ್ಯ: ಕೊರೊನಾ ಮೂರನೇ ಅಲೆ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಮದುವೆ, ಸಭೆ-ಸಮಾರಂಭಗಳಿಗೆ 30ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಎಂಬ ಆದೇಶ ಇದೆ. ಮಂಡ್ಯ ತಹಶೀಲ್ದಾರ್ ನೂರಾರು ಜನರನ್ನು ಸೇರಿಸಿಕೊಂಡು ತಮ್ಮ ಮಗನ ಬರ್ತ್ ಡೇ ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿದ್ದಾರೆ.

ಮಂಡ್ಯದ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‍ನಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಮಂಗಳವಾರ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರು ಜಿಲ್ಲೆಯಲ್ಲಿ ಕೊರೊನಾ ಮೂರನೇ ತಡೆಗಟ್ಟುವ ದೃಷ್ಟಿಯಿಂದ ಮದುವೆ ಸೇರಿದಂತೆ 30 ಜನರು ಸೇರುವ ಎಲ್ಲಾ ಕಾರ್ಯಕ್ರಮಗಳಿಗೆ ನಿಬಂಧ ವಿಧಿಸಿದ್ದರು. ಇದನ್ನೂ ಓದಿ: ಕೊರೊನಾ ಭೀತಿ-ಮಂಡ್ಯದಲ್ಲಿ 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಿಷೇಧ

ಇದೀಗ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಮಂಡ್ಯ ತಹಶೀಲ್ದಾರ್ ನೂರಾರು ಜನರನ್ನು ಸೇರಿಸಿಕೊಂಡು ಬರ್ತ್ ಡೇ ಪಾರ್ಟಿಯನ್ನು ಮಾಡಿದ್ದಾರೆ. ಈ ಪಾರ್ಟಿಗೆ ಮಂಡ್ಯ ಜಿಲ್ಲೆಯ ವಿವಿಧ ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಕುಟುಂಬಸ್ಥರು ಸೇರಿದಂತೆ ಬೇರೆ ಜಿಲ್ಲೆಗಳಿಂದ ಜನರು ಬಂದಿದ್ದರು. ಜಿಲ್ಲಾಧಿಕಾರಿಗಳು ಜನರು ಹೀಗೆ ಇರಬೇಕೆಂದು ರೂಲ್ಸ್ ಮಾಡುವಾಗ ತಮ್ಮ ಅಧಿಕಾರಿಗಳಿಗೆ ಆ ರೂಲ್ಸ್‍ಗಳು ಅನ್ವಯ ಆಗುವುದಿಲ್ಲವೆ?, ಜನರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ತಹಶೀಲ್ದಾರ್ ಮೇಲೆ ಏನು ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *