ಡಿಜೆ ಹಳ್ಳಿ ಗಲಭೆ- ಇಬ್ಬರು ಶಾಸಕರನ್ನ ವಿಚಾರಣೆ ನಡೆಸಿದ ಎನ್‍ಐಎ

ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎನ್‍ಐಎ ಇಬ್ಬರು ಕಾಂಗ್ರೆಸ್ ಶಾಸಕರನ್ನು ವಿಚಾರಣೆಗೆ ಒಳಪಡಿಸಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಇಬ್ಬರು ಎನ್‍ಐಎ ವಿಚಾರಣೆ ಹಾಜರಾಗಿ ತಮ್ಮ ಹೇಳಿಕೆಯನ್ನ ದಾಖಲಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಾಗ ಇಬ್ಬರು ಶಾಸಕರು ಘಟನಾ ಸ್ಥಳದಲ್ಲಿರುವ ಬಗ್ಗೆ ಎನ್‍ಐಎಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಎನ್‍ಐಎ ಇಬ್ಬರನ್ನು ಬೆಂಗಳೂರಿನ ದೊಮ್ಮಲೂರಿನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಮಂಗಳವಾರ ಜಮೀರ್ ಅಹ್ಮದ್ ಮತ್ತು ಸೋಮವಾರ ರಿಜ್ವಾನ್ ಅರ್ಷದ್ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

ಜಮೀರ್ ಅಹ್ಮದ್ ಅವರನ್ನು ಸುಮಾರು 20 ನಿಮಿಷ ಮತ್ತು ರಿಜ್ವಾನ್ ಅರ್ಷದ್ ಅವರನ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಎನ್‍ಐಎ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಅಂದು ಗಲಭೆ ಸ್ಥಳಕ್ಕೆ ನೀವು ಹೋಗಿದ್ಯಾಕೆ? ಗಲಭೆ ಬಗ್ಗೆ ನಿಮಗೆ ಹೇಗೆ ಗೊತ್ತಾಯ್ತು? ಇದು ಪೂರ್ವ ನಿಯೋಜಿತ ಅಂತ ನಿಮಗೆ ಅನ್ನಿಸಿದೆಯಾ? ಉದ್ರಿಕ್ತರು ನಿಮ್ಮ ಮಾತು ಆಲಿಸುವ ಸೌಜನ್ಯ ತೋರಿಸಿದ್ರಾ? ಗಲಭೆ ಕೋರರನ್ನ ಕುರಿತು ಏನು ಹೇಳಿದಿರಿ ಎಂದು ಪ್ರಶ್ನೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿ.ಜೆ. ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಿಸಿಬಿ ಕೋರ್ಟ್ ಗೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿನ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಜೀವಂತ ದಹನಕ್ಕೆ ಸಂಚು ನಡೆದಿತ್ತು ಎಂಬ ವಿಚಾರ ಬಯಲಾಗಿದೆ. ಡಿ.ಜೆ. ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್-ಎಸ್‍ಡಿಪಿಐ ಪಾತ್ರವಿರೋ ಬಗ್ಗೆ ಚಾರ್ಜ್‍ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಮುಸ್ಲಿಂ ಬಾಹುಳ್ಯದ ತಿಲಕ್‍ನಗರ, ಚಾಮರಾಜಪೇಟೆ, ಗೋರಿಪಾಳ್ಯದ ಪುಂಡ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿಸಿದ್ದಾರೆ. ಅಖಂಡ ಮನೆಗೆ ಬೆಂಕಿ ಬಿದ್ದಾಗ, ಕೇವಲ 100 ಮೀಟರ್ ದೂರದಲ್ಲಿ ಇರುವ ಸಂತೋಷ್ ನಿವಾಸದಲ್ಲಿ ಸಂಪತ್ ರಾಜ್ ಇದ್ದರು. ಅಸಲಿಗೆ ಗಲಭೆಗೆ ಫಂಡಿಂಗ್ ಮಾಡಿದ್ದೇ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್.

ಗಲಭೆ ನಡೆಸಲು ಬಂದಿದ್ದ ಪುಂಡರಿಗೆ ಸಂಪತ್ ರಾಜ್ ಫ್ರೀಯಾಗಿ ಸಂಪತ್ ರಾಜ್ ಪೆಟ್ರೋಲ್ ಕೊಡಿಸಿದ್ರು. ಇದರ ಜವಾಬ್ದಾರಿಯನ್ನು ಅರುಣ್ ವಹಿಸಿಕೊಂಡಿದ್ದನು. ಕಾವಲ್ ಬೈರಸಂದ್ರದ ಬಸ್ ನಿಲ್ದಾಣದಲ್ಲೇ ಹಣ ಕೂಡ ಹಂಚಲಾಗಿತ್ತು ಎಂಬುದಕ್ಕೆ ದೃಶ್ಯ ಸಾಕ್ಷ್ಯ ಸಮೇತ ಸಿಸಿಬಿ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್‍ಶೀಟ್ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಟ್ಯಾನರಿ ರೋಡ್‍ನ ಸಂಪತ್ ರಾಜ್ ನಿವಾಸದೆದರು ಪ್ರತಿಭಟನೆ ನಡೆಸಿದರು. ಸಂಪತ್ ರಾಜ್, ಜಾಕೀರ್ ಬಂಧಿಸುವಂತೆ ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *