ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಒಂದು ವರ್ಷ

– ನ್ಯಾಯ ಸಿಕ್ಕೇ ಸಿಗುತ್ತೆ ಅಂದ್ರು ಶಾಸಕ ಅಖಂಡ

ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಇಂದಿಗೆ ಬರೋಬ್ಬರಿ ಒಂದು ವರ್ಷ ತುಂಬಿದೆ. ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್ ಹಾಕಿದ್ದ ಪೋಸ್ಟ್ ನೆಪಕ್ಕೆ ಶುರುವಾಗಿದ್ದ, ಗಲಾಟೆ ಪ್ರಕರಣ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗಲಭೆಕೋರರು, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಬಳಿ ಜಮಾಯಿಸಿ ಕಲ್ಲು ತೂರಾಟ ಮಾಡಿ ಅಲ್ಲಿಂದ ವಾಹನಗಳು ಸೇರಿದಂತೆ ಮನೆಗೆ ಬೆಂಕಿ ಹಾಕಿದ್ದರು. ನಂತರ ನೋಡು ನೋಡುತ್ತಿದ್ದಂತೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಪುಂಡಾಟ ಮೆರೆದು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಮನೆಗಳಿಗೆ ಕಲ್ಲು ತೂರಾಟ ಮಾಡಿದ್ದರು.

ಗಲಭೆ ವಿಕೋಪಕ್ಕೆ ಹೋಗ್ತಿದ್ದಂತೆ ಡಿಜೆ ಹಳ್ಳಿ , ಕೆಜಿ ಹಳ್ಳಿ ಪೊಲೀಸ್ ಠಾಣೆಯ ಬಳಿ ಬಂದ ನೂರಾರು ಗಲಭೆಕೊರರು, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿ ಪೊಲೀಸರ ವಾಹನಗಳನ್ನು ಸುಟ್ಟು ಪುಂಡಾಟ ಮೆರದಿದ್ದರು. ಪೊಲೀಸರು ಇಷ್ಟೆಲ್ಲಾ ನಡೀತಿದ್ರು ಏನು ಮಾಡಲಾಗದ ಸ್ಥಿತಿಯಲ್ಲಿ ನಿಲ್ಲಬೇಕಾಯಿತು. ಕೊನೆಗೆ ಪರಿಸ್ಥಿತಿ ಕೈ ಮೀರುತ್ತಿರುವದನ್ನ ನೋಡಿ ಪೊಲೀಸರು ಫೈರಿಂಗ್ ಶುರುಮಾಡಿದ್ದರು. ಈ ವೇಳೆ ಓರ್ವ ಗುಂಡೇಟಿಗೆ ಬಲಿಯಾಗಿದ್ದ.

ಎನ್‍ಐಎ ಮತ್ತು ಸಿಸಿಬಿ ಪೊಲೀಸರು ತನಿಖೆ ನಡೆಸಿ 450ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ತನಿಖೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡದ ಬಗ್ಗೆ ಸಾಕ್ಷಿ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಕೂಡ ಬಂಧಿಸಲಾಗಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ಎನ್‍ಐಎ ಪೊಲೀಸರು ನಡೆಸುತ್ತಿದೆ. ವಿಪರ್ಯಾಸವೆಂದರೆ ಗಲಾಟೆಯಲ್ಲಿ ಹಾನಿಗೊಳಾದ ಡಿಜೆ ಹಳ್ಳಿ ಪೊಲೀಸ್ ಠಾಣೆ ಇನ್ನೂ ಕೂಡ ಹಾಗೇ ಇದೆ. ಮನೆ ಕಳೆದುಕೊಂಡ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಕೂಡ ನೆಲಸಮ ಆಗಿದ್ದು, ಇನ್ನೂ ನಿರ್ಮಾಣ ಆಗಿಲ್ಲ. ಇದನ್ನೂ ಓದಿ: ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಪ್ರತಿಕ್ರಿಯೆ:
ಬೆಂಗಳೂರಿನ ಡಿಜೆ ಹಳ್ಳಿ -ಕೆಜಿ ಹಳ್ಳಿ ಗಲಭೆಗೆ ಇಂದಿಗೆ ಸರಿಯಾಗಿ ಒಂದು ವರ್ಷ ಆದ ಹಿನ್ನೆಲೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾಧ್ಯಮ ಗಳಿಗೆ ಪ್ರತಿಕ್ರಿಯೆಸಿದ್ದಾರೆ. ಕಳೆದ ವರ್ಷ ಇದೇ ದಿನದಂದು ನಮ್ಮ ಮನೆ ಮೇಲೆ ನೂರಾರು ಸಂಖ್ಯೆಯಲ್ಲಿ ಕಿಡಿಗೇಡಿಗಳು ಗಲಾಟೆ ಮಾಡಿ ಬೆಂಕಿ ಹಾಕಿದ್ರು. ಮನೆ ಮುಂದಿದಿದ್ದ ವಾಹನಗಳನ್ನು ಸುಟ್ಟು ಹಾಕಿದ್ರು. ನಮ್ಮ ಕುಟುಂಬ ತಾಯಿ -ತಂದೆ ಬಾಳಿ ಬದುಕಿದ ಮನೆ ಇದು. ನೋಡಿದ್ರೆ ದುಖಃ ಆಗುತ್ತೆ. ಇನ್ನೂ ಕೂಡ ಇಲ್ಲಿ ಹೊಸ ಮನೆ ನಿರ್ಮಾಣ ಮಾಡಲು ಆಗಿಲ್ಲ. ನಮ್ಮ ಪಕ್ಷದ ಕೆಲ ನಾಯಕರೇ ಅಂದಿನ ಘಟನೆಗೆ ಪರೋಕ್ಷವಾಗಿ ಬೆಂಬಲ ನೀಡಿರೋದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ನಾನು ಇನ್ನೂ ಕೂಡ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.  ಇದನ್ನೂ ಓದಿ:ಹೀಗೊಂದು ವಿಚಿತ್ರ ಕೋಳಿ ಮೊಟ್ಟೆ – ಮನೆಯವರಿಗೆ ಅಚ್ಚರಿ

ನನಗೆ ನ್ಯಾಯ ಸಿಕ್ಕೇ ಸಿಗುತ್ತೆ:
ನನ್ನ ಮನೆ ಮೇಲಿನ ದಾಳಿಗೆ ಯಾರೆಲ್ಲಾ ಕಾರಣ, ಏನೆಲ್ಲಾ ಮಾಡಿದ್ದು ಅನ್ನೋದನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೀನಿ. ಅವರು ನನಗೆ ನ್ಯಾಯ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನಗೂ ಕೂಡ ನ್ಯಾಯ ಸಿಗುವ ವಿಶ್ವಾಸವಿದೆ, ನಮ್ಮ ಪಕ್ಷದ ಮಾಜಿ ಮೇಯರ್ ಸಂಪತ್ ರಾಜ್, ಯಾಸೀರ್, ಅರುಣ್, ಸಂತೋಷ, ಝಕೀರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇನೆ.. ಈ ಪ್ರಕರಣದಲ್ಲಿ ಬಂಧನವಾಗಿ, ಈಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಅವರ ಜಾಮೀನು ವಜಾ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದೇನೆ. ತಡವಾದ್ರು ನನಗೆ ನ್ಯಾಯ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆ ನನ್ನದು. ನನಗೆ ಆದ ರೀತಿ ಬೇರೆ ಯಾವುದೇ ಶಾಸಕ ಅಥವಾ ವ್ಯಕ್ತಿ ಗೆ ಆಗಬಾರದು ಅಂತಾ ತಮ್ಮ ಮನದ ನೋವವನ್ನು ಹೊರಹಾಕಿದರು. ಇದನ್ನೂ ಓದಿ:ಅಕ್ಟೋಬರ್ 1ರೊಳಗೆ ಮೀಸಲಾತಿ ಪ್ರಕಟಿಸಿ- ಸರ್ಕಾರಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಂದೇಶ

Comments

Leave a Reply

Your email address will not be published. Required fields are marked *