ಡಿಕೆ ಶಿವಕುಮಾರ್ ಹಾಗೇ ಮಾಡಿರಲಾರರು ಅಂದುಕೊಂಡಿದ್ದೇನೆ – ಮಾಧುಸ್ವಾಮಿ ಸಾಫ್ಟ್ ಮಾತು

ಮೈಸೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಯುವತಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ನಾನು ಡಿಕೆಶಿ ಅವರು ಹಾಗೇ ಮಾಡಿರಲಾರರು ಅಂದುಕೊಂಡಿದ್ದೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಡಿಕೆಶಿ ಪರ ಸಾಫ್ಟ್ ಕಾರ್ನರ್ ತೋರಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧುಸ್ವಾಮಿ, ನಾನು ಡಿ.ಕೆ ಶಿವಕುಮಾರ್ ಅವರನ್ನು ಹಲವು ವರ್ಷದಿಂದ ನೋಡಿದ್ದೇನೆ. ಅವರು ಈ ರೀತಿ ಮಾಡಿರಲಾರರು ಎಂದು ಅಂದುಕೊಂಡಿದ್ದೇನೆ. ಆ ಯುವತಿ ಅವರ ಹೆಸರು ಹೇಳಿದ್ದಾಳೆ ನಿಜ. ಆದರೆ ಅದನ್ನು ಹೊರತುಪಡಿಸಿ ಮತ್ಯಾವ ಗಂಭೀರ ಸಾಕ್ಷ್ಯವನ್ನು ಆಕೆ ನೀಡಿಲ್ಲ. ಹಾಗಾಗಿ ಏನಾಗುತ್ತೆ ಎಂದು ಕಾದು ನೋಡೋಣ ಎಂದಿದ್ದಾರೆ.

ಘಟನೆಯಲ್ಲಿ ಏನೋ ಇದೆ ಅಂತ ತನಿಖೆಗೆ ಆದೇಶ ಮಾಡಲಾಗಿದೆ. ಈ ಘಟನೆಯಲ್ಲಿ ನರೇಶ್ ಗೊತ್ತಿಲ್ಲ ಅಂತ ಹೇಳೋಕಾಗೋಲ್ಲ. ಆಕೆ ಮಾತನಾಡಿರುವುದನ್ನು ಮತ್ತು ಡಿಕೆಶಿ ಹೇಳಿರೋದನ್ನು ಕೇಳಿದ್ದೇವೆ. ಆದರೆ ನರೇಶ್ ಬೇರೆ ಕಥೆ ಹೇಳುತ್ತಿದ್ದಾರೆ. ಸಿಡಿ ಕೇಸ್‍ನಲ್ಲಿ ಜಾರಕಿಹೊಳಿ ಅವರನ್ನು ಬಂಧಿಸಲುಬಹುದು, ಬಂಧನ ಮಾಡದೇಯೂ ಇರಬಹುದು. ಕೇಸ್‍ನ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪೂರಕ ಅಂಶ ಇದ್ದರೆ ಬಂಧಿಸಬಹುದು. ಇಲ್ಲವಾದಲ್ಲಿ ಅವರನ್ನು ಕೇವಲ ವಿಚಾರಣೆ ಮಾಡಿ ಬಿಡಬಹುದು ಎಂದು ಪ್ರತಿಕ್ರಿಯಿಸಿದರು.

ಈ ಘಟನೆಯಲ್ಲಿ ಬಹಳ ಗೊಂದಲ ಇದೆ. ಈ ಕೇಸ್ ಪೊಲೀಸರಿಗೂ ಕಷ್ಟ ಇದೆ. ಆಕೆ ದೃಢವಾಗಿ ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ. ಕೆಲವರು ಆಡಿಯೋ ಡಬ್ ಅಂತಾರೆ, ವಿಡಿಯೋ ಎಡಿಟ್ ಅಂತಾರೆ. ಈ ಕುರಿತು ತನಿಖೆ ನಡೆದ ಮೇಲಷ್ಟೆ ನಾವು ಮಾತನಾಡಬೇಕಿದೆ. ಇಂತಹ ಘಟನೆಗಳು ರಾಜ್ಯಕ್ಕೆ ಮುಜುಗರ ಆಗುತ್ತೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ನಾವು ಪ್ರಬುದ್ಧರಾಗಿದ್ದರೆ ವೈಯುಕ್ತಿಕ ಬದುಕನ್ನು ಚರ್ಚೆ ಮಾಡುತ್ತಲೇ ಇರಲಿಲ್ಲ. ಅದು ಅವರ ವೈಯುಕ್ತಿಕ ಅಂತ ಸುಮ್ಮನಾಗಬಹುದಿತ್ತು. ಆದರೆ ನಾವು ಎಲ್ಲರು ಎಷ್ಟು ತೇಜೋವಧೆ ಮಾಡಿದ್ದೀವಿ. ರಾಜ್ಯದಲ್ಲಿ ಬೇರೆ ಸುದ್ದಿ ಇಲ್ಲವೆಂಬಂತೆ ಬಿಂಬಿಸುತ್ತಿದ್ದೇವೆ. ಮೇಟಿ ಕೇಸ್‍ನಲ್ಲೂ ಕೂಡ ಮರ್ಯಾದೆ ಹೋಯ್ತು ಆದರೆ ಕೇಸ್ ಏನು ಆಗಲೇ ಇಲ್ಲ. ನನಗೆ ಆಂಜಿಯೋಪ್ಲ್ಯಾಸ್ಟಿ ಆಗಿದೆ. ನಾನು ಸ್ಟಂಟ್ ಹಾಕಿಸಿಕೊಂಡಿದ್ದೇನೆ. ಹಾಗಾಗಿ ನಾನು ಸದನಕ್ಕೆ ಹೋಗಿಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *