ಡಿಕೆಶಿ ಸೀತೆಯಷ್ಟೇ ಪವಿತ್ರವಾಗಿ ಕೇಸ್ ನಿಂದ ಹೊರಗೆ ಬರಲಿ: ಈಶ್ವರಪ್ಪ

ರಾಯಚೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಈ ಹಿಂದೆ ದಾಳಿ ಮಾಡಿದಾಗ ಹವಾಲಾ ಹಣ ಸಿಕ್ಕಿದೆ. ಈಗ ಡಿ.ಕೆ.ಶಿವಕುಮಾರ್ ತಪ್ಪು ಮಾಡಿಲ್ಲವೆಂದರೆ ಸೀತೆಯಷ್ಟು ಪವಿತ್ರವಾಗಿ ಕೇಸ್ ನಿಂದ ಹೊರಗೆ ಬರಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ಚರಪ್ಪ ಹೇಳಿದ್ದಾರೆ.

ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಶಶಿಲ್ ನಮೋಶಿ ಪರ ಪಕ್ಷದ ಮುಖಂಡರ ಪ್ರಚಾರ ಸಭೆ ಬಳಿಕ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಕುರಿತು ಮಾತನಾಡಿ, ಈ ಹಿಂದೆ ದಾಳಿಯಾದಾಗ ಹಲವು ದಾಖಲೆಗಳು ಸಿಕ್ಕಿದ್ದರಿಂದ ಡಿಕೆಶಿ ಜೈಲಿಗೆ ಹೋಗಿ ಬಂದಿದ್ದಾರೆ. ಯಡಿಯೂರಪ್ಪನವರು ಜೈಲಿಗೆ ಹೋಗಿ ತಪ್ಪಿತಸ್ಥರಲ್ಲ ಎಂದು ಸಾಬೀತಾಗಿ ಹೊರಬಂದರು. ಡಿ.ಕೆ.ಶಿವಕುಮಾರ್ ಸಹ ಹಾಗೆಯೇ ಹೊರಬರಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.

ವಾಲ್ಮೀಕಿ ಜನಾಂಗಕ್ಕೆ ಶೇ7.5 ರಷ್ಟು ಮೀಸಲಾತಿ ನೀಡುವ ವಿಚಾರದ ಬಗ್ಗೆ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಕುರುಬರಿಗೆ ಎಸ್‍ಟಿ ನೀಡುವ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಕಸಿದುಕೊಳ್ಳುವುದಿಲ್ಲ. ಹಿಂದುಳಿದ ಸಮಾಜಕ್ಕೆ ಎಸ್‍ಟಿ ನೀಡಬೇಕು ಎಂಬ ಕೂಗಿಗೆ ನನ್ನ ಬೆಂಬಲವಿದೆ. ಒಂದು ಪಾಯಿಂಟ್ ಮೀಸಲಾತಿಯೂ ವಾಲ್ಮೀಕಿ ಸಮಾಜದಿಂದ ಕಿತ್ತುಕೊಳ್ಳುವುದಿಲ್ಲ ಎಂದರು.

ಮಾಸ್ಕ್ ಧರಿಸುವ ಮಹತ್ವ ತಿಳಿಸಲು ದಂಡ ಹೆಚ್ಚಿಗೆ ಮಾಡಲಾಗಿತ್ತು. ಜನರು ದಂಡ ಇಳಿಕೆಗೆ ಆಗ್ರಹಿಸಿದರು. ಹೀಗಾಗಿ ದಂಡದ ಪ್ರಮಾಣ ಇಳಿಸಲಾಗಿದೆ. ಮಾಸ್ಕ್ ಹಾಕದಿದ್ದರೆ 250 ರೂ. ಕೊಡುವುದು ಮುಖ್ಯವಲ್ಲ, ಜೀವ ಮುಖ್ಯ. ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.

Comments

Leave a Reply

Your email address will not be published. Required fields are marked *