ಡಿಕೆಶಿ ಬಾಂಬ್ ಸಿಡಿಸಿಯೇ ಶಿರಾ, ಆರ್.ಆರ್.ನಗರದಲ್ಲಿ ಸೋತು ಅಡ್ರೆಸ್ ಇಲ್ಲದಂತಾಗಿದ್ದಾರೆ: ಬಿ.ಸಿ.ಪಾಟೀಲ್

ಹಾವೇರಿ: ಡಿ.ಕೆ.ಶಿವಕುಮಾರ್ ಬಾಂಬ್ ಸಿಡಿಸಿಯೇ ಶಿರಾ ಮತ್ತು ಆರ್.ಆರ್.ನಗರದಲ್ಲಿ ಉಪಚುನಾವಣೆಗಳಲ್ಲಿ ನೆಲಕಚ್ಚಿದ್ದಾರೆ. ಡಿಕೆಶಿ ಅಡ್ರೆಸ್ ಇಲ್ಲದೆ ಹೋಗಿದ್ದಾರೆ. ಈಗ ಅವರು ಅಭ್ಯರ್ಥಿ ಹಾಕೋಕು ಯೋಚಿಸುವಂತಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿ ಕಾರಿದರು.

ಜಿಲ್ಲೆಯ ಹಿರೇಕೆರೂರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ನೆಲಕಚ್ಚಿ ಹೋಗಿದೆ. ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಟ್ಟು, ಅವರ ಪಕ್ಷದ್ದು ನೋಡಿಕೊಳ್ಳಲಿ. ಬಿಜೆಪಿಗೆ ಬಂದವರು ವಾಪಸ್ ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ. ಶಿರಾ ಮತ್ತು ಆರ್.ಆರ್.ನಗರ ಚುನಾವಣೆಯಲ್ಲಿ ಡಿಕೆಶಿ ಗೆಲ್ಲುತ್ತೇವೆ ಎಂದೇ ಹೇಳಿದ್ದರು. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಮನೋಭಾವ ಡಿ.ಕೆ.ಶಿವಕುಮಾರ್ ಅವರದ್ದು. ಇದೀಗ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ತಪ್ಪು ಮಾಡಿದವರು ಕೋರ್ಟ್ ಕೇಸಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸಿಬಿಐ ಸ್ವತಂತ್ರ ಸಂಸ್ಥೆ. ತಪ್ಪು ಮಾಡಿದವರನ್ನು ವಿಚಾರಣೆ ನಡೆಸಿದರೆ ಬಿಜೆಪಿ ಮೇಲೆ ಗೂಬೆ ಕೂರಿಸೋದು ಸರಿಯಲ್ಲ ಎಂದರು.

ಕೋಡಿಹಳ್ಳಿ ಶ್ರೀ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ಕೋಡಿಹಳ್ಳಿ ಶ್ರೀಗಳು ರಾಜಕೀಯಕ್ಕೆ ಬರಬೇಡಿ ಭವಿಷ್ಯವಿಲ್ಲ ಎಂದು ನನಗೂ ಹೇಳಿದ್ದರು. ಇವತ್ತು ನನ್ನ ಭವಿಷ್ಯ ಏನಾಗಿದೆ. ನಾಲ್ಕು ಬಾರಿ ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ. ಎಲ್ಲವೂ ಭವಿಷ್ಯದ ಮೇಲೆ ನಿರ್ಧಾರ ಆಗಲ್ಲ. ಎಲ್ಲ ಭವಿಷ್ಯದ ಮೇಲೆಯೇ ನಿರ್ಧಾರ ಆಗಿದ್ದರೆ ಯಾರೂ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಮಾಟ ಮಂತ್ರ ಮಾಡಿಸ್ಕೊಂಡು ಚುನಾವಣೆಲಿ ಗೆಲ್ಲಬಹುದಿತ್ತು. ಜನರ ಸೇವೆ, ಜನರ ಸಂಪರ್ಕ ಇಟ್ಟುಕೊಂಡವರಿಗೆ ರಾಜಕೀಯದಲ್ಲಿ ನೆಲೆಯಿದೆ. ಆಡಳಿತಾತ್ಮಕ ದೃಷ್ಟಿಯಿಂದ ವಿಜಯನಗರ ಜಿಲ್ಲೆ ಆಗಿದ್ದು ಒಳ್ಳೆಯದು. ಸಿಎಂ ಎಲ್ಲ ಶಾಸಕರನ್ನ ಗಮನದಲ್ಲಿಟ್ಟುಕೊಂಡು, ಜನರ ಅನುಕೂಲದ ದೃಷ್ಟಿಯಿಂದ ಜಿಲ್ಲೆ ಮಾಡಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *