ಡಿಕೆಶಿ ಬಳಿ ವೀಡಿಯೋಗಳಿದ್ದರೆ ಕೊಡಲಿ ತನಿಖೆ ಮಾಡುತ್ತೇವೆ: ಬೊಮ್ಮಾಯಿ

ರಾಯಚೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಯಚೂರಿನಲ್ಲಿ ಹೇಳಿದ್ದಾರೆ.

ರಾಯಚೂರು ಪ್ರವಾಸದಲ್ಲಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂತೋಷ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಒಂದೆರಡು ದಿನದಲ್ಲಿ ಸರಿಹೋಗಬಹುದು. ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆ ಮಾಡಲಾಗುವುದು ಎಂದರು.

ಎಂಎಲ್‍ಸಿ ಹಾಗೂ ಮಿನಿಸ್ಟರ್ ವೀಡಿಯೋ ವಿಚಾರದಲ್ಲಿ ಒತ್ತಡ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅನ್ನೊ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಡಿಕೆ ಶಿವಕುಮಾರ್ ಬಳಿ ಯಾವುದೇ ವೀಡಿಯೋಗಳಿದ್ದರೆ ನೀಡಲಿ. ಅವರು ಕೊಡುವ ವೀಡಿಯೋಗಳನ್ನು ತನಿಖೆಗೆ ಒಳಪಡಿಸುತ್ತೇವೆ ಎಂದು ಹೇಳಿದರು.

ಮುಂಬರುವ ವರ್ಷದಲ್ಲಿ 100 ಕೋಟಿ ರೂ. ಯೋಜನೆಯಲ್ಲಿ ಪೊಲೀಸ್ ಠಾಣೆಗಳ ಆಧುನಿಕರಣ ಮಾಡಲಾಗುವುದು. ವಿಧಿ ವಿಜ್ಞಾನ ಕೇಂದ್ರಗಳ ಸಾಮಥ್ರ್ಯ ಹೆಚ್ಚಿಸಿ, ಆಧುನೀಕರಣ ಮಾಡಲಾಗುವುದು. ಮಾನವ ಕಳ್ಳಸಾಗಾಣಿಕೆ ಪ್ರಕರಣವನ್ನು ಈಗ ಮಹಿಳಾ ಠಾಣೆಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾನವ ಕಳ್ಳಸಾಗಾಣಿಕೆ ತಡೆಗೆ ವಿಶೇಷ ತಂಡ ರಚಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *