ಡಿಕೆಶಿ ಏನು ಕಡಿದು ಕಟ್ಟೆ ಹಾಕಿದ್ದಾರೆಂದು ಫೋನ್ ಕದ್ದಾಲಿಸಬೇಕು – ಈಶ್ವರಪ್ಪ

ಶಿವಮೊಗ್ಗ: ಸರ್ಕಾರ ತನ್ನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಅವರ ಫೋನ್ ಟ್ಯಾಪಿಂಗ್ ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ. ಡಿಕೆಶಿ ಈಗಾಗಲೇ ಮುಗಿದು ಹೋಗಿರುವ ಕಾಂಗ್ರೆಸ್‍ಗೆ ಬಂದು ಲೀಡರ್ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಪೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ. ಅವರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಪ್ರಶ್ನೆಯೇ ಉದ್ಬವವಾಗುವುದಿಲ್ಲ ಎಂದರು.

ಸ್ವತಂತ್ರ ಭಾರತದಲ್ಲಿ ಈ ಹಿಂದೆ ಕಾಂಗ್ರೆಸ್ ಎಂದರೆ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ವೀರ ಸಾವರ್ಕರ್ ಹೆಸರು ನೆನಪಿಗೆ ಬರುತ್ತಿದ್ದವು. ಆದರೆ ಇಂದು ಕಾಂಗ್ರೆಸ್ ಎಂದಾಕ್ಷಣ ನೆನಪಿಗೆ ಬರುವುದು ಎರಡೇ ಹೆಸರು ಒಂದು ಸೋನಿಯಾ ಗಾಂಧಿ ಮತ್ತೊಂದು ರಾಹುಲ್ ಗಾಂಧಿ ಎಂದು ವ್ಯಂಗ್ಯವಾಡಿದರು.

ಪ್ರಸ್ತುತ ಕಾಂಗ್ರೆಸ್ ಒಡೆದ ಕನ್ನಡಿಯಾಗಿ ಚೂರು ಚೂರಾಗಿದೆ. ಹೀಗಿರುವಾಗ ಅದನ್ನು ಒಟ್ಟಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷ ಎಂದ ಕೂಡಲೇ ಅದಕ್ಕೆ ತತ್ವ, ಸಿದ್ಧಾಂತ ಅತಿ ಮುಖ್ಯ. ಆದರೆ ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಾಯಕತ್ವ ಬೇಡ ಎಂದು 23 ಮಂದಿ ಪತ್ರ ಬರೆದಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿಯವರ ನಾಯಕತ್ವ ಬೇಕು ಎನ್ನುವಂತಹ ಕಾಲದಲ್ಲಿ ಕಾಂಗ್ರೆಸ್‍ಗೆ ಇಂತಹ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದರು.

ಕಾಂಗ್ರೆಸ್ ಇಂದಲ್ಲ ನಾಳೆ ಮುಳುಗುವ ಹಡಗು. ಸ್ವತಂತ್ರ್ಯ ಬಂದಾಕ್ಷಣ ಕಾಂಗ್ರೆಸ್ ಅನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧಿಜೀಯವರು ಹೇಳಿದ್ದರು. ಆದರೆ ಅಧಿಕಾರಕ್ಕಾಗಿ ವಿಸರ್ಜನೆ ಮಾಡಲು ಮುಂದಾಗಲಿಲ್ಲ. ಆದರೆ ಇದೀಗ ಅದೇ ಕಾಂಗ್ರೆಸ್ ನಾಯಕತ್ವ ಮತ್ತು ಅಧ್ಯಕ್ಷಗಾದಿ ವಿಚಾರವಾಗಿ ಅಸಮಾಧಾನ ಉಂಟಾಗಿದೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ನಾಯಕತ್ವ ಇರಲಿ ಎಂದರೆ, ಡಿಕೆಶಿ ಸೋನಿಯಾ ಗಾಂಧಿ ನಾಯಕತ್ವ ಇರಲಿ ಎನ್ನುತ್ತಿದ್ದಾರೆ. ಇದರ ನಡುವೆ ವೀರಪ್ಪ ಮೊಯ್ಲಿ ಅವರು ಇವರಿಬ್ಬರ ನಾಯಕತ್ವ ಬೇಡ ಎನ್ನುತ್ತಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೊಗಳಿದರೆ ಸ್ಥಾನಮಾನ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.

Comments

Leave a Reply

Your email address will not be published. Required fields are marked *