ಡಿಕೆಶಿ ಅರೆಸ್ಟ್ ಮಾಡಿ ಉಪಚುನಾವಣೆ ಗೆಲ್ಲಬೇಕಿಲ್ಲ, ಬಿಜೆಪಿ ಗೆಲುವು ಶತಸಿದ್ಧ- ಶೆಟ್ಟರ್ ವಿಶ್ವಾಸ

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕೇಸ್ ಹಾಕಿ. ಸಿಬಿಐ ದಾಳಿ ಮಾಡಿಸಿ, ಅವರನ್ನು ಬಂಧನ ಮಾಡಿಸಿಯೇ ಚುನಾವಣೆ ಗೆಲ್ಲಬೇಕಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧವೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಸಚಿವರು, ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ಕಾನೂನಿನ ಅಡಿಯಲ್ಲಿ ದಾಳಿ ಮಾಡಿದೆ. ಇದೂ ರಾಜಕೀಯ ಪ್ರೇರಿತ ದಾಳಿ ಅಲ್ಲ. ಕಾಂಗ್ರೆಸ್ ರಾಜಕೀಯ ಪ್ರೇರಿತ ದಾಳಿ ಅಂತಾ ಆರೋಪಿಸುವುದು ಸರಿಯಲ್ಲ ಎಂದರು.

ಬಿಜೆಪಿ ಕಳೆದ 12 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ವೇಳೆ ಯಾರ ಮೇಲೂ ದಾಳಿ ಮಾಡಿಸಿಲ್ಲ. ಡಿಕೆ ಶಿವಕುಮಾರ್ ಅಕ್ರಮ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಡಿಕೆಶಿ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ, ಅದನ್ನು ಮರೆಯಬಾರದು ಎಂದು ಶೆಟ್ಟರ್ ಡಿಕೆಶಿ ವಿರುದ್ಧ ಗುಡುಗಿದರು.

ಸಿಬಿಐ ಸ್ವತಂತ್ರ ಸಂಸ್ಥೆವಾದ ಸಂಸ್ಥೆ. ಕಾಂಗ್ರೆಸ್ ನವರು ಈ ಹಿಂದೆ ಬಿಜೆಪಿಯವರು ಜೈಲಿಗೆ ಹೋಗಿ ಬಂದವರು ಅಂತಾ ಆರೋಪ ಮಾಡುತ್ತಿದ್ದರು. ಇದೀಗ ಜೈಲಿಗೆ ಹೋಗಿ ಬಂದ ಡಿಕೆಶಿಯನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲದೇ ಉತ್ತರ ಪ್ರದೇಶದ ಸಿಎಂ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಅವರು ಕೆಳಹಂತದ ಭಾಷೆಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಕೆಳಹಂತದ ಭಾಷೆ ಬಳಸಿ ಆರೋಪ ಮಾಡುವುದು ನಮ್ಮ ಸಂಸ್ಕೃತಿ ಅಲ್ಲವೆಂದು ಶೆಟ್ಟರ್ ಕಿಡಿಕಾರಿದರು.

ಬಿಜೆಪಿ ಪಕ್ಷ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತಾ ಆರೋಪ ಮಾಡುವ ಕಾಂಗ್ರೆಸ್ ನಾಯಕರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡಿತ್ತಾ? ಸಿಬಿಐ ದುರ್ಬಳಕೆ ಮಾಡಿಕೊಂಡು ಆಂಧ್ರಪ್ರದೇಶದ ಸಿಎಂ ಜಗಮೋಹನ್ ರೆಡ್ಡಿ ಅವರನ್ನು 2 ವರ್ಷ ಜೈಲಿನಲ್ಲಿ ಇರಿಸಿತ್ತಾ ಎಂದು ಪ್ರಶ್ನಿಸಿದ್ದಾರೆ. ಸಿಬಿಐ ದಾಳಿಯನ್ನು ಕಾಂಗ್ರೆಸ್ ನಾಯಕರು ರಾಜಕೀಯ ಪ್ರೇರಿತವಾಗಿ ನೋಡಬಾರದು ಎಂದು ಸಿಬಿಐ ದಾಳಿಯನ್ನು ಸಮರ್ಥಿಸಿಕೊಂಡರು.

Comments

Leave a Reply

Your email address will not be published. Required fields are marked *