ಡಿಕೆಶಿಗೆ ಮತ್ತೆ ಶಾಕ್ – ಸಿಬಿಐ ಬೆನ್ನಲ್ಲೇ ಫೀಲ್ಡಿಗೆ ಇಳಿದ ಇಡಿ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಮತ್ತು ಮನಿ ಲಾಂಡ್ರಿಂಗ್ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಅವರನ್ನು ತನಿಖಾ ಸಂಸ್ಥೆಗಳು ಬಿಡುವಂತೆ ಕಾಣ್ತಿಲ್ಲ. ಸಿಬಿಐ ಬೆನ್ನಲ್ಲೇ ಜಾರಿ ನಿರ್ದೇಶನಾಲಯ(ಇಡಿ) ಕೂಡ ಫೀಲ್ಡಿಗೆ ಇಳಿದಿದೆ.

ಡಿಕೆಶಿ ಆಪ್ತರು ಮತ್ತು ಬಂಧುಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ. ಡಿಕೆಶಿ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಮನಿ ಲಾಂಡ್ರಿಂಗ್ ಪ್ರಕರಣದ ತನಿಖೆಯ ಭಾಗವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು 7 ಮಂದಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದ್ರೆ ಈ ಹಂತದಲ್ಲಿ ಖುದ್ದು ಹಾಜರಾತಿ ಸಾಧ್ಯವಿಲ್ಲ ಎಂದು ರಾಜೇಶ್, ಗಂಗಾಶರಣ್, ಜಯಶೀಲಾ, ಚಂದ್ರ, ಲಕ್ಷ್ಮಮ್ಮ, ಮೀನಾಕ್ಷಿ ಮತ್ತು ಹನುಮಂತರಾಯಪ್ಪ ದೆಹಲಿ ಹೈಕೋರ್ಟನ್ನು ಆಶ್ರಯಿಸಿದ್ರು. ಈ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ ನೀಡಿ ಆದೇಶ ನೀಡಿದೆ.

ನವೆಂಬರ್ 19ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. ಸಿಆರ್‌ಪಿಸಿ ಸೆಕ್ಷನ್ ಉಲ್ಲಂಘಿಸಿ ಇಡಿ ಸಮನ್ಸ್ ಜಾರಿ ಮಾಡಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಇಡಿ ಪರ ವಕೀಲರು, ವಿಚಾರಣೆ ಅಗತ್ಯವಿದ್ದ ಕಾರಣಕ್ಕೆ ಸಮನ್ಸ್ ನೀಡಲಾಗಿದೆ ಎಂದು ಸಮರ್ಥಿಸಿಕೊಂಡ್ರು. ಇದೇ ಪ್ರಕರಣದಲ್ಲಿ ಡಿಕೆಶಿವಕುಮಾರ್ ಕಳೆದ ವರ್ಷ ಜೈಲು ಸೇರಿದ್ದರು.

Comments

Leave a Reply

Your email address will not be published. Required fields are marked *