ಡಿಕೆಶಿಗೆ ಕಾಂಗ್ರೆಸ್‍ನಲ್ಲಿ ಅಭದ್ರತೆ ಕಾಡುತ್ತಿರಬೇಕು: ಸುನಿಲ್ ಕುಮಾರ್ ತಿರುಗೇಟು

– ನಮ್ಮ ಸಿಎಂ ಭದ್ರತೆ ಬಗ್ಗೆ ನಿಮಗೆ ಆತಂಕ ಬೇಡ

ಉಡುಪಿ: ಸಿಎಂ ವಿರುದ್ಧ ಜನ ಮುಗಿಬೀಳುತ್ತಾರೆ, ಅವರಿಗೆ ಭದ್ರತೆ ನೀಡಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಮುಖಂಡ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.

ಸರ್ಕಾರದ ಮುಖ್ಯ ಸಚೇತಕರೂ ಆದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿ, ಡಿಕೆಶಿಗೆ ಅವರ ಪಕ್ಷದಲ್ಲಿ ಅಭದ್ರತೆ ಕಾಡುತ್ತಿರಬೇಕು. ಹಾಗಾಗಿ ಇನ್ನೊಬ್ಬರ ಭದ್ರತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಮುಖ್ಯಮಂತ್ರಿಗಳಿಗೆ ಭದ್ರತೆಯ ಸಮಸ್ಯೆಯೇ ಇಲ್ಲ ಎಂದ ಸುನಿಲ್ ಕುಮಾರ್, ಡಿಕೆಶಿ ಅವರೊಂದಿಗೆ ಸಿದ್ದರಾಮಯ್ಯ ಜೊತೆಗಿನ ಭಿನ್ನಮತ ಈಗಾಗಲೇ ಬಹಿರಂಗವಾಗಿದೆ. ಬಿಜೆಪಿ ಸರ್ಕಾರದ ಅವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಕಾಲಾವಕಾಶ ಇದೆ. ಈಗಲೇ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ಶುರುವಾಗಿದೆ. ಡಿಕೆಶಿಗೆ ಆ ಅಭದ್ರತೆ ಕಾಡುತ್ತಿರಬಹುದು.

ಡಿ.ಕೆ ಶಿವಕುಮಾರ್ ಗೆ ಸಿದ್ದರಾಮಯ್ಯ, ಪರಮೇಶ್ವರ್ ರನ್ನು ಕಂಡಾಗ ಅಭದ್ರತೆ ಕಾಡಬಹುದು. ಸದ್ಯ ನಮ್ಮಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ನೂರಕ್ಕೆ ನೂರು ಪ್ರತಿಶತ ಯಾವುದೇ ಚರ್ಚೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ದುರಂತ: 36 ಜನರ ಸಾವು, ಸರ್ಕಾರ ಮಾಡಿದ ಕೊಲೆ: ಡಿಕೆಶಿ

ಡಿ.ಕೆ.ಶಿವಕುಮಾರ್ ಹೇಳಿದ್ದೇನು?:
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಕೆಪಿಸಿಸಿ ವತಿಯಿಂದ 1 ಲಕ್ಷ ಚೆಕ್ ಹಸ್ತಾಂತರ ಮಾಡಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿಗೆ ಬಂದ್ರೆ ಜನ ರೊಚ್ಚಿಗೆದ್ದು ಹೊಡೆಯುತ್ತಾರೆ ಎಂಬ ಕಾರಣಕ್ಕೆ ಸಿಎಂ ಯಡಿಯೂರಪ್ಪ ಬಂದಿಲ್ಲ. ಈ ಕುರಿತ ಗುಪ್ತಚರ ಮಾಹಿತಿ ತಿಳಿದೇ ಸಿಎಂ ಆಗ್ಲಿ, ಸಚಿವರಾಗಲಿ, ಬಿಜೆಪಿಯ ಮುಖಂಡರಾಗಲಿ ಇತ್ತ ಮುಖ ಮಾಡಿಲ್ಲ. ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರ ನಡೆಸುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ

Comments

Leave a Reply

Your email address will not be published. Required fields are marked *