ಡಿಆರ್‌ಡಿಒಗೆ ಸುಧಾಕರ್ ಭೇಟಿ – ವಿಜ್ಞಾನಿಗಳಿಂದ ಸಚಿವರಿಗೆ ಮಾಹಿತಿ

ಬೆಂಗಳೂರು: ಕೋವಿಡ್ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬನೆ ಕಡಿಮೆ ಮಾಡುವ 2-ಡಿಜಿ ಔಷಧಿ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಜ್ಞಾನಿಗಳಿಂದ ಮಾಹಿತಿ ಪಡೆದರು.

ಡಿಆರ್‌ಡಿಒಗೆ ಭೇಟಿ ನೀಡಿದ ಸಚಿವರಿಗೆ ಈ ಕುರಿತು ವಿಜ್ಞಾನಿಗಳು ವಿವರಿಸಿದರು. ಡಿಆರ್‌ಡಿಒದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಡ್ ಅಲೈಡ್ ಸೈನ್ಸಸ್ ಲ್ಯಾಬ್ ಹಾಗೂ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ತಯಾರಿಸಿದ ಈ ಔಷಧಿ ರೋಗಿಗಳು ಬೇಗನೆ ಗುಣಮುಖರಾಗಲು ನೆರವಾಗಲಿದೆ. ಈ ಔಷಧಿಯಿಂದ ಕೋವಿಡ್ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಸಾಬೀತಾಗಿದೆ. ತುರ್ತು ಬಳಕೆಯ ಆಧಾರದಲ್ಲಿ ಕೋವಿಡ್ ರೋಗಿಗಳಿಗೆ ಈ ಔಷಧಿ ನೀಡಲು ಅನುಮತಿ ದೊರೆತಿದ್ದು, ಸಕಾರಾತ್ಮಕ ಫಲಿತಾಂಶ ಕಂಡುಬಂದಿದೆ ಎಂದು ವಿಜ್ಞಾನಿಗಳು ವಿವರಿಸಿದರು.

ಕೋವಿಡ್ ಎರಡನೇ ಅಲೆಯಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಹೆಚ್ಚಿನವರಿಗೆ ಆಕ್ಸಿಜನ್ ಬೇಕಾಗಿದೆ. ಈ ಔಷಧಿ ನೀಡುವುದರಿಂದ ಆಕ್ಸಿಜನ್ ಬಳಕೆ ತಗ್ಗಲಿದೆ. ಜೊತೆಗೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆಯಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದರು.

ಆಕ್ಸಿಕೇರ್ ಸಿಸ್ಟಮ್
ರೋಗಿಗಳಿಗೆ ನೀಡುವ ಆಕ್ಸಿಜನ್ ಅನ್ನು ನಿಯಂತ್ರಿಸಲು ಡಿಆರ್‌ಡಿಒದಿಂದ ಆಕ್ಸಿಕೇರ್ ಸಿಸ್ಟಮ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ರೋಗಿಗಳಿಗೆ ನಿರ್ದಿಷ್ಟವಾಗಿ ಎಷ್ಟು ಆಕ್ಸಿಜನ್ ನೀಡಬೇಕೆಂದು ನಿರ್ಧರಿಸಬಹುದಾಗಿದೆ. ಇದನ್ನು ಆಸ್ಪತ್ರೆ ಮಾತ್ರವಲ್ಲದೆ ಮನೆ, ಕೋವಿಡ್ ಕೇರ್ ಸೆಂಟರ್ ನಲ್ಲೂ  ಬಳಸಬಹುದು. ಪಿಎಂ ಕೇರ್ಸ್ ಫಂಡ್ ನಿಂದ 322.5 ಕೋಟಿ ರೂ. ವೆಚ್ಚದಲ್ಲಿ 1.5 ಲಕ್ಷ ಆಕ್ಸಿಕೇರ್ ಸಿಸ್ಟಮ್ ಖರೀದಿಸಲಾಗುತ್ತಿದೆ ಎಂದು ವಿಜ್ಞಾನಿಗಳು ವಿವರಣೆ ನೀಡಿದರು.

ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್ ತಿಪ್ಪಸಂದ್ರದಲ್ಲಿ ಡಿಆರ್ ಡಿಒದಿಂದ ಸ್ಥಾಪಿಸುತ್ತಿರುವ ಆಕ್ಸಿಜನ್ ಘಟಕ ವೀಕ್ಷಿಸಿದರು. ನಂತರ ಮಾತನಾಡಿ, ಬೆಂಗಳೂರು ನಗರವು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜಧಾನಿಯಾಗಿದ್ದು, ಅನೇಕ ಪ್ರತಿಷ್ಠಿತ ಸಂಸ್ಥೆಗಳಿಗೆ ನೆಲೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಡಿಆಆರ್‍ಡಿಒ ಹಾಗೂ ಐಐಎಸ್‍ಸಿ ಯ ಪ್ರಯತ್ನಗಳು ಶ್ಲಾಘನೀಯವಾಗಿವೆ. ಐಐಎಸ್ ಸಿಯಿಂದ ಅಭಿವೃದ್ಧಿಪಡಿಸುತ್ತಿರುವ ಸಾಮಾನ್ಯ ತಾಪಮಾನದಲ್ಲೂ ಸಂಗ್ರಹಿಸಿಡಬಹುದಾದ ಲಸಿಕೆ ಹಾಗೂ ಡಿಆರ್‌ಡಿಒ ಅಭಿವೃದ್ಧಿಪಡಿಸಿ 2-ಡಿಜಿ, ಆಕ್ಸಿಕೇರ್ ಸಿಸ್ಟಮ್ ಕೋವಿಡ್ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಿದೆ ಎಂದರು.

Comments

Leave a Reply

Your email address will not be published. Required fields are marked *